ಮಡಿಕೇರಿ, ಫೆ. ೮: ಸಮೀಪದ ಹೆಬ್ಬೆಟ್ಟಗೇರಿ ವಿಸ್ಮಯ ಕ್ರಿಕೆರ‍್ಸ್ ವತಿಯಿಂದ ಆಯೋಜಿಸಲಾಗಿದ್ದ ಕೆ.ನಿಡುಗಣೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡ ಗೆಲುವು ಸಾಧಿಸಿದರೆ, ಸ್ಪೂರ್ತಿ ಕ್ರಿಕೆರ‍್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ಹಾಗೂ ಸ್ಪೂರ್ತಿ ಕ್ರಿಕೆರ‍್ಸ್ ತಂಡ ಪೈನಲ್ ಪ್ರವೇಶಿಸಿತ್ತು. ಮಂದ ಬೆಳಕಿನ ಹಿನ್ನೆಲೆ ಫೈನಲ್ ಪಂದ್ಯವನ್ನು ೪ ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ಟಾಸ್ ಗೆದ್ದ ಸ್ಪೂರ್ತಿ ಕ್ರಿಕೆರ‍್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡ ೪ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೪೫ ರನ್ ಗುರಿ ನೀಡಿತು. ಗೆಲ್ಲಲು ಬೇಕಿದ್ದ ೪೬ ರನ್ ಗುರಿ ಬೆನ್ನಟ್ಟಿದ ಸ್ಪೂರ್ತಿ ಕ್ರಿಕೆರ‍್ಸ್ ತಂಡ ೨.೨ ಓವರ್‌ಗಳಲ್ಲಿ ೭ ರನ್‌ಗೆ ೩ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತ್ತು. ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡದ ರಮೇಶ್ ಪಂದ್ಯಪುರೋಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಪಂದ್ಯಾವಳಿಗೆ ಕೆ.ನಿಡುಗಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊಕ್ಕಲೇರ ಕೆ. ಅಯ್ಯಪ್ಪ ಚಾಲನೆ ನೀಡಿದರು. ಇದೇ ಸಂದರ್ಭ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ರಾಯ್‌ತಮ್ಮಯ್ಯ, ಕೊರೊನಾದಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಹೆಬ್ಬೆಟ್ಟಗೇರಿಯ ವಿಸ್ಮಯ ಕ್ರಿಕೆರ‍್ಸ್ ತಂಡ ಪಂದ್ಯಾವಳಿ ಆಯೋಜಿಸಿ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸಿರುವುದು ಉತ್ತಮ ಬೆಳವಣಿಗೆ ಎಂದರು. ಕಾರ್ಯಕ್ರಮದಲ್ಲಿ ಕೆ.ನಿಡುಗಣೆ ಗ್ರಾ.ಪಂ. ಸದಸ್ಯರಾದ ರೀಟಾ ಮುತ್ತಣ್ಣ, ಸತೀಶ್ ಪೂಜಾರಿ, ಪುಷ್ಪಲತಾ ಪ್ರೇಮ್‌ಕುಮಾರ್, ಪ್ರಮೀಳಾ ಸುರೇಶ್, ಕೆ.ಡಿ. ಪಾರ್ವತಿ, ಸನಿತಾ ಪ್ರಮೋದ್, ಪಿ.ಸಿ. ರಘು ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆ ನಳಿನಿ, ಸ್ಟಾಪ್ ನರ್ಸ್ ಉಷಾ, ಲ್ಯಾಬ್ ಟೆಕ್ನಿಷಿಯನ್ ನಂದಿತಾ ಗೊನ್ಸಾಲ್‌ವೆನ್ಸ್, ಹತ್ತನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಧನುಷ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಂದ್ಯಾವಳಿಯಲ್ಲಿ ಹಿಮಾನಿ ಹಿಟ್ಟರ್ಸ್ ತಂಡದ ಸ್ಟೀಪನ್ ಬೆಸ್ಟ್ ಬ್ಯಾಟ್ಸ್ಮೆನ್ ಹಾಗೂ ಮ್ಯಾನ್ ಆಫ್ ದಿ ಸೀರಿಸ್, ಸ್ಪೂರ್ತಿ ಕ್ರಿಕೇರ‍್ಸ್ನ ಸುನಿಲ್ ಬೆಸ್ಟ್ ಬೌಲರ್, ಮಿಸ್ಟಿ ಲ್ಯಾಡ್ಸ್ ತಂಡದ ನಯನ್ ಬೆಸ್ಟ್ ಫೀಲ್ಡರ್, ಮಿಸ್ಟಿ ಲ್ಯಾಡ್ಸ್ ತಂಡದ ಬೆಳ್ಯಪ್ಪ ಬೆಸ್ಟ್ ಕ್ಯಾಚ್, ಎಕ್ಸ್ ಲಯನ್ಸ್ ತಂಡದ ರಜಿತ್ ಮೋಸ್ಟ್ ವ್ಯಾಲ್ಯೂಬೇಲ್ ಪ್ಲೇಯರ್ ಹಾಗೂ ಸ್ಪೂರ್ತಿ ಕ್ರಿಕೇರ‍್ಸ್ ತಂಡದ ತೇಜಸ್ ಅಪ್‌ಕಮಿಂಗ್ ಪ್ಲೇಯರ್ ಪ್ರಶಸ್ತಿಗಳನ್ನು ಪಡೆದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ೧೫,೦೦೦ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು.