ಕುಶಾಲನಗರ, ಫೆ. ೮: ಕಾವೇರಿ ನದಿ ಸಂರಕ್ಷಣೆಗಾಗಿ ಅವಶ್ಯ ಅನುದಾನವನ್ನು ಮಂಜೂರು ಮಾಡಿಕೊಡಲು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲು ಕೊಡಗು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ. ಅವರು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ನೀಡಿರುವ ನದಿ ಸಂರಕ್ಷಣೆಗೆ ಕ್ರಿಯಾಯೋಜನೆ ರೂಪಿಸುವ ಮನವಿ ಮೇರೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಗೆ ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯ ವಸ್ತುಗಳು, ಕಲುಷಿತ ನೀರು ಹಾಗೂ ಪ್ರವಾಸಿಗರು ಬಳಸಿ ಬಿಸಾಡುವ ತ್ಯಾಜ್ಯ ವಸ್ತುಗಳಿಂದ ಮೂಲದಿಂದಲೇ ನಿರಂತರವಾಗಿ ಕಲುಷಿತಗೊಳ್ಳುವುದನ್ನು ತಡೆಯಲು ಸರಕಾರದಿಂದ ಅವಶ್ಯವಿರುವ ಅನುದಾನ ಮಂಜೂರು ಮಾಡಿಕೊಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಭಾಗಮಂಡಲದಿAದ ಕೊಡಗು ಜಿಲ್ಲೆಯ ಗಡಿಭಾಗ ಕುಶಾಲನಗರ ತನಕ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವ ಕಾವೇರಿಯ ೨೩ ಗ್ರಾಪಂ, ಒಂದು ಪಪಂ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಗಳ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇತ್ತೀಚೆಗೆ ಸಮಗ್ರ ಮಾಹಿತಿಯೊಂದಿಗೆ ಮನವಿ ಸಲ್ಲಿಸಲಾಗಿತ್ತು.