ಮಡಿಕೇರಿ, ಫೆ.೮ : ಕೊಡಗು ಜಿಲ್ಲೆಗೆ ರಾಷ್ಟçಪತಿಗಳು ಆಗಮಿಸಿದ ಸಂದರ್ಭ ವೀರಸೇನಾನಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪಿಸಲು ದಶಕಗಳವರೆಗೆ ಶ್ರಮಿಸಿದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ರಾಷ್ಟçಪತಿಗಳ ಭೇಟಿ ಜಿಲ್ಲೆಯ ಜನತೆಯಲ್ಲಿ ಯಾವುದೇ ಭರವಸೆಯನ್ನು ಮೂಡಿಸಿಲ್ಲವೆಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮ್ಯೂಸಿಯಂ ಉದ್ಘಾಟನೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡದ ಆಡಳಿತ ವ್ಯವಸ್ಥೆ ಜನರನ್ನು ಮನೆಯೊಳಗೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಅಡಚಣೆ ಉಂಟು ಮಾಡಿರುವುದು ಸರಿಯಾದಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರಿಗೂ ಅವಕಾಶ ನೀಡದೆ ನಿರ್ಲಕ್ಷಿಸಲಾಗಿದೆ, ಕೊಡವರ ಸಾಂಪ್ರದಾಯಿಕ ಉಡುಗೆ, ತೊಡುಗೆಗಳಿಗೂ ಅಗತ್ಯ ಗೌರವ ದೊರೆಯಲಿಲ್ಲ ಎಂದು ಆರೋಪಿಸಿದ್ದಾರೆ. ಕೊಡಗಿನವರ ಬೇಡಿಕೆಯಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವುದು, ನಿರಂತರ ಮೂರು ವರ್ಷಗಳಿಂದ ಸಂಭವಿಸಿದ ಪ್ರಾಕೃತಿ ವಿಕೋಪದಲ್ಲಿ ನೊಂದ ಜನರಿಗೆ ಸಾಂತ್ವನ ಹೇಳುವುದು, ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಕೊಡಗು ಮೂಲದ ಸೇನಾನಿಗಳನ್ನು ಸೈನ್ಯದ ಮುಖ್ಯಸ್ಥರ ಹುದ್ದೆಗೆ ಪರಿಗಣಿಸುವುದು, ಭಾರತೀಯ ಸೈನ್ಯದಲ್ಲಿ ಕೂರ್ಗ್ ರೆಜಿಮೆಂಟ್ ರಚಿಸುವುದು, ೨೦೨೬ ರಲ್ಲಿ ಡಿಲಿಮಿಟೇಶನ್ನ ಸಂದರ್ಭ ದಲ್ಲಿ ಕೊಡಗಿನÀ ಹಿತಾಸಕ್ತಿಗಳನ್ನು ರಕ್ಷಿಸುವುದು, ಸಂವಿಧಾನದ ವಿಧಿ ೨೪೨ ರಡಿಯಲ್ಲಿ ಕೊಡಗಿಗೆ ಭದ್ರತೆಯನ್ನು ವಿಸ್ತರಿಸುವುದು, ೩೪೨ ರಡಿಯಲ್ಲಿ ಕೊಡಗಿನ ಹಕ್ಕುಗಳನ್ನು ಸ್ಥಾಪಿಸುವುದು ಸೇರಿದಂತೆ ಕೊಡಗಿನ ಜನರ ನಿರೀಕ್ಷೆಗಳಿಗೆ ಪೂರಕವಾಗಿ ರಾಷ್ಟçಪತಿಗಳಿಂದ ಯಾವುದೇ ಭರವಸೆಗಳು ದೊರೆಯದೆ ಇರುವುದು ಬೇಸರ ಮೂಡಿಸಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.