ಮಡಿಕೇರಿ, ಫೆ. ೮: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ವೀಡಿಯೋ ಸಂವಾದದಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್, ಪೊಲೀಸ್ ಇಲಾಖೆಯ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ನಗರಸಭೆ, ಮತ್ತು ಪಟ್ಟಣ ಪಂಚಾಯತ್ ಪೌರಕಾರ್ಮಿಕರಿಗೆ ಲಸಿಕೆಯನ್ನು ತಾ. ೮ ರಿಂದ ರಾಜ್ಯಾದ್ಯಂತ ನೀಡಲು ಸೂಚಿಸಿದ್ದು, ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ತಾ. ೯ ರಿಂದ ಕೋವಿಡ್-೧೯ ಲಸಿಕಾ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ತಿಳಿಸಿದ್ದಾರೆ. (ಮೊದಲ ಪುಟದಿಂದ) ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ೮೦, ಮಡಿಕೇರಿ ಗ್ರಾ.ಪಂ. ೧೮೨, ಸೋಮವಾರಪೇಟೆ ತಾಲೂಕು ಗ್ರಾ.ಪಂ. ೫೦೧, ವೀರಾಜಪೇಟೆ ತಾಲೂಕು ಗ್ರಾ.ಪಂ. ೨೯೧, ಮಡಿಕೇರಿ ತಾಲೂಕು ಪಂಚಾಯತ್ ೭೭, ಸೋಮವಾರಪೇಟೆ ತಾಲೂಕು ೧೭, ವೀರಾಜಪೇಟೆ ತಾಲೂಕು ಪಂಚಾಯತ್ ೨೫, ಒಟ್ಟು ೧೧೭೩ ಮಂದಿಗೆ, ಹಾಗೆಯೇ ಕಂದಾಯ ಇಲಾಖೆಯ ಮಡಿಕೇರಿ ತಾಲ್ಲೂಕಿನ ೧೦೭, ಸೋಮವಾರಪೇಟೆ ತಾ. ೮೬, ವೀರಾಜಪೇಟೆ ತಾಲೂಕು ೮೭ ಒಟ್ಟು ೨೮೦ ಫಲಾನುಭವಿಗಳಿದ್ದಾರೆ. ಪೌರಕಾರ್ಮಿಕರು ೩೨೯, ಪೊಲೀಸರು ೧,೩೪೪, ಸೇರಿ ೧,೬೭೩. ಒಟ್ಟು ೩೧೨೬ ಫಲಾನುಭವಿಗಳಿದ್ದು, ಇವರಿಗೆ ಲಸಿಕೆಯನ್ನು ನೀಡಲು ಜಿಲ್ಲಾ ಆಸ್ಪತ್ರೆ, ಮಡಿಕೇರಿ, ತಾಲೂಕು ಆಸ್ಪತ್ರೆ, ಸೋಮವಾರಪೇಟೆ, ವೀರಾಜಪೇಟೆ, ಸಮುದಾಯ ಆರೋಗ್ಯ ಕೇಂದ್ರಗಳಾದ ನಾಪೋಕ್ಲು, ಕುಶಾಲನಗರ, ಶನಿವಾರಸಂತೆ, ಸಿದ್ದಾಪುರ, ಪಾಲಿಬೆಟ್ಟ, ಗೋಣಿಕೊಪ್ಪ ಮತ್ತು ಕುಟ್ಟ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ದಾಸ್ತಾನು ಇರಿಸಿ ಕ್ರಿಯಾ ಯೋಜನೆಯಂತೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೋವಿಡ್ ಲಸಿಕೆಯನ್ನು ಎರಡು ಹಂತದಲ್ಲಿ ನೀಡಬೇಕಿದ್ದು, ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಒಟ್ಟು ೬೫೬೦ ಫಲಾನುಭವಿಗಳಲ್ಲಿ ೪,೪೩೨ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, ಯಾವುದೇ ರೀತಿಯ ಅಡ್ಡ ಪರಿಣಾಮ ಕಂಡು ಬಂದಿರುವುದಿಲ್ಲ. ಒಟ್ಟು ಶೇ. ೬೭.೫೬ ಸಾಧನೆ ಸಾಧಿಸಿದ್ದು, ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಇತರೆ ಇಲಾಖೆಯ ಎಲ್ಲಾ ನೌಕರರು ಈ ಲಸಿಕೆಯನ್ನು ತಮ್ಮ ದೂರವಾಣಿ ಸಂಖ್ಯೆಗೆ ಸಂದೇಶ ಬಂದ ನಂತರ ಸಂದೇಶದಲ್ಲಿ ತಿಳಿಸಲಾಗಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋರಿದ್ದಾರೆ.