ಶ್ರೀಮಂಗಲ, ಫೆ. ೬: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಗುರುವಾರ ರಾತ್ರಿ ರೈತ ಮಲ್ಲೇಂಗಡ ಪಿ. ಧನಂಜಯ ಅವರ ಕೊಟ್ಟಿಗೆಯಿಂದ ಗಬ್ಬದ ಹಸುವನ್ನು ದಾಳಿ ಮಾಡಿ ಹುಲಿ ಕೊಂದು ಹಾಕಿದ ಮಾರನೇ ದಿನ ಶುಕ್ರವಾರ ರಾತ್ರಿ ಹಸುವಿನ ಕಳೆ ಬರವನ್ನು ತಿನ್ನಲು ಬಂದಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿ ಸೆರೆಯಾಗಿದೆ.
ಶುಕ್ರವಾರ ಮಧ್ಯರಾತ್ರಿ ೧೨ ಗಂಟೆಗೆ ಹುಲಿ ಆಗಮಿಸಿ ಹಸುವಿನ ಕಳೆಬರವನ್ನು ಸ್ವಲ್ಪ ದೂರ ಎಳೆದೊಯ್ದು ತಿಂದಿದ್ದು ೧ ಗಂಟೆಯವರೆಗೆ ಸ್ಥಳದಲ್ಲಿ ಇದ್ದು ತೆರಳಿರುವುದು ಅರಣ್ಯ ಇಲಾಖೆ ಹುಲಿಯ ಚಲನ ವಲನ ಹಾಗೂ ಚಹರೆಯನ್ನು ಪತ್ತೆ ಹಚ್ಚಲು ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಶನಿವಾರ ಆಗಮಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಹುಲಿಯ ಚಲನವಲನವನ್ನು ಖಚಿತ ಪಡಿಸಿದರು.
ಹುಲಿ ಮಧ್ಯರಾತ್ರಿ ಹಸುವಿನ ಕಳೆ ಬರವನ್ನು ತಿನ್ನಲು ಬಂದಿರುವುದರಿAದ ಸಮೀಪದಲ್ಲಿ ಹುಲಿ ಇರುವುದು ಖಚಿತವಾಗಿದೆ. ಶನಿವಾರ ಕೂಡ ಹುಲಿ ಬರುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗುವುದು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ ತಿಳಿಸಿದ್ದಾರೆ.
ಸ್ಥಳಾಂತರಕ್ಕೆ ಆಗ್ರಹ: ಪೊರಾಡು ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಗ್ರಾಮದಲ್ಲಿಯೇ ಬೀಡು ಬಿಟ್ಟಿರುವ ಹುಲಿಯಿಂದ ಜನ ಮತ್ತು ಜಾನುವಾರುಗಳಿಗೆ ಯಾವುದೇ ಅಪಾಯವಾಗದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಬಿರುನಾಣಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬುಟ್ಟಿಯಂಡ ತಂಬಿನಾಣಯ್ಯ ಒತ್ತಾಯಿಸಿದ್ದಾರೆ.