ಮಡಿಕೇರಿ, ಫೆ. ೫: ಸೇನಾ ಇತಿಹಾಸದಲ್ಲಿ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರು ದಂತಕಥೆ... ಸೈನಿಕರ ಕಣ್ಮಣಿ, ಸೈನಿಕರ ಜನರಲ್ ಎಂಬಿತ್ಯಾದಿ ಯಾಗಿ ಪರಿಗಣಿಸಲ್ಪಟ್ಟಿರುವ ತಿಮ್ಮಯ್ಯ ಅವರ ಸೇವೆ... ಸಾಹಸಗಾಥೆ... ಜೀವನಶೈಲಿ ಇವೆಲ್ಲವೂ ಎಂದಿಗೂ ಅಳಿಸಲಾಗದ ಇತಿಹಾಸವೇ ಸರಿ... ಆದರೆ ತಿಮ್ಮಯ್ಯ ಅವರ ಬದುಕಿನ ಅಂತ್ಯ ಹಾಗೂ ನಂತರದ ಕೆಲ ವರ್ಷಗಳ ಅವರಿಗೆ ದೊರೆಯಬೇಕಿದ್ದ ಗೌರವಯುತ ಸ್ಥಾನಮಾನದ ವಿಚಾರ ಮಾತ್ರ ವಿಷಾದನೀಯವಾಗಿತ್ತು ಎಂಬದು ಹಲವರಿಗೆ ಅದರಲ್ಲೂ ಈಗಿನ ಯುವ ಜನಾಂಗಕ್ಕೆ ಅರಿವಿಲ್ಲ.

ಹೌದು... ತಿಮ್ಮಯ್ಯ ಅವರನ್ನು ಕೊಡವ ಜನಾಂಗದವರು ತಮ್ಮವರೆಂದು, ಕೊಡಗಿನ ಜನತೆ ತಮ್ಮ ಜಿಲ್ಲೆಯವರೆಂದು, ಕರ್ನಾಟಕ ರಾಜ್ಯದ ಮಂದಿ ರಾಜ್ಯದ ವೀರ ಸೇನಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇದು ಸಹಜವೂ ಕೂಡ... ಆದರೆ ಇಂತಹ ಐತಿಹ್ಯ ಹೊಂದಿರುವ ವೀರ ಸೇನಾನಿಯೊಬ್ಬರು ಅದೂ ದೇಶದ ಸೇನೆಯ ಜನರಲ್ ಆಗಿದ್ದವರು ಕೊನೆಯುಸಿರು ಎಳೆದ ಬಳಿಕ ಯಾವದೇ ಸೂಕ್ತ ಗೌರವ ಸಿಗದೆ, ಸಾರ್ವಜನಿಕ ಸ್ಮಶಾನವೊಂದರಲ್ಲಿ ತೀರಾ ಸಾಮಾನ್ಯ ವ್ಯಕ್ತಿಯಂತೆ ಮಣ್ಣಾಗಿ ಮೂಲೆಗುಂಪಾಗಿದ್ದರು ಎಂಬುದು ತಿಮ್ಮಯ್ಯ ಜೀವನ ಪಯಣದ ಕೊನೆಯಲ್ಲಿನ ಕಹಿ ಘಟನೆಯಾಗಿದೆ.

ಆದರೂ ಒಬ್ಬ ವ್ಯಕ್ತಿಯ ಸೇವೆ - ಸಾಧನೆ ಆದರ್ಶ ಪ್ರಾಯದ ಬದುಕು ಎಂದಿಗೂ ಅಂತಹವರನ್ನು ಅಜರಾಮರನ್ನಾಗಿಸುತ್ತದೆ ಎಂಬದಕ್ಕೆ ತಿಮ್ಮಯ್ಯ ಅವರೇ ಜ್ವಲಂತ ಉದಾಹರಣೆ.

ಭೂಗರ್ಭದಿಂದ ಮೇಲೆದ್ದರು...

ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರು ೧೮-೧೨-೧೯೬೫ರಲ್ಲಿ ಸೈಪ್ರಸ್ ದೇಶದಲ್ಲಿ ವಿಧಿವಶರಾಗಿದ್ದರು. ಅಲ್ಲಿಂದ ಇವರ ಪಾರ್ಥಿವ ಶರೀರವನ್ನು ಕರ್ನಾಟಕಕ್ಕೆ ತಂದು ಬೆಂಗಳೂರಿನ ವಿಲ್ಸನ್‌ಗಾರ್ಡ್ನ್‌ನಲ್ಲಿರುವ ಹರಿಶ್ಚಂದ್ರ ಘಾಟ್ ಸಾರ್ವಜನಿಕ ರುದ್ರಭೂಮಿಯಲ್ಲಿ ಮಣ್ಣು ಮಾಡಲಾಗಿತ್ತು.

ಇಂತಹ ವ್ಯಕ್ತಿಗೆ ಸಿಗಬೇಕಾಗಿದ್ದ ನ್ಯಾಯೋಚಿತ ಗೌರವ ಆ ಸಂದರ್ಭದಲ್ಲಿ ದೊರೆತಿರಲಿಲ್ಲ. ಆದರೆ ತಿಮ್ಮಯ್ಯ ಅವರು ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಗುರುತಿಸಲ್ಪಟ್ಟಂತಹ ಓರ್ವ ಸೇನಾಧಿಕಾರಿಯಾಗಿದ್ದವರು. ಇದರಂತೆ ಇವರು ಸೈಪ್ರಸ್‌ನಂತಹ ದೇಶದ ಸೇನೆಯನ್ನು ಅಚ್ಚುಕಟ್ಟಿನ ತರಬೇತಿಯೊಂದಿಗೆ ಸಜ್ಜುಗೊಳಿಸಿದ್ದರು. ಸೈಪ್ರಸ್‌ನ ಸೇನೆಯನ್ನು ಕಟ್ಟಿ ಬೆಳೆಸಿದ ಸಂದರ್ಭದಲ್ಲಿ ಅಲ್ಲಿ ಕ್ಯಾಪ್ಟನ್ ರ‍್ಯಾಂಕ್‌ನಲ್ಲಿದ್ದ ಅಧಿಕಾರಿಯೊಬ್ಬರು ಬಳಿಕ ಜನರಲ್ ಹುದ್ದೆಗೇರಿದ್ದರು. ಇವರು ಭಾರತಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮ ಸೇನಾ ಗುರುವಾಗಿದ್ದ ಜನರಲ್ ತಿಮ್ಮಯ್ಯ ಅವರ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದರು. ಇದರಂತೆ ತಿಮ್ಮಯ್ಯ ಅವರ ಸಮಾಧಿ ಎಲ್ಲಿದೆ ಎಂಬ ಕುರಿತು ಕೇಳಿದಾಗ ಆ ಸೇನಾಧಿಕಾರಿಗೆ ಸೂಕ್ತ ಉತ್ತರವೇ ಸಿಗಲಿಲ್ಲವಂತೆ. ಬಳಿಕ ಮಾಹಿತಿ ಕಲೆ ಹಾಕಿದಾಗ ತಿಮ್ಮಯ್ಯರನ್ನು ವಿಲ್ಸನ್‌ಗಾರ್ಡನ್‌ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಮಣ್ಣು ಮಾಡಿರುವದು ತಿಳಿದು ಬಂದಿದೆ. ತಕ್ಷಣವೇ ಆ ಸ್ಥಳಕ್ಕೆ ಅವರು ಭೇಟಿಯಿತ್ತಾಗ ಆ ಸ್ಥಳ ಕಸಕಡ್ಡಿಗಳು, ಕಾಡಿನಿಂದ ಆವೃತ್ತವಾಗಿದ್ದ ಹೀನಾಯ ಸ್ಥಿತಿ ನೋಡಿ ಅವರು ಕಂಬನಿ ಮಿಡಿದಿದ್ದರು.

ಈ ಕುರಿತು ಸಂಬAಧಿಸಿದವರೊAದಿಗೆ ಚರ್ಚಿಸಿದ ಅವರು ನಿಮಗೆ ತಿಮ್ಮಯ್ಯ ಅವರ ಮಹತ್ವದ ಅರಿವಿಲ್ಲ. ಇವರನ್ನು ಈ ರೀತಿಯಲ್ಲಿ ಅವಮಾನಿಸಿರುವದು ಸರಿಯಲ್ಲ. ಸೈಪ್ರಸ್‌ನಲ್ಲಿ ನಾವು ಅವರ ಸ್ಮಾರಕಭವನ ನಿರ್ಮಿಸಿದ್ದೇವೆ. ರಸ್ತೆಗಳಿಗೆ, ಭವನಗಳಿಗೆ ತಿಮ್ಮಯ್ಯ ಹೆಸರನ್ನಿಡಲಾಗಿದೆ. ಇಂತಹ ಅವಮಾನದ ಬದಲಾಗಿ ಹೂತಿರುವ ದೇಹವನ್ನು ನಮಗೆ ಹಸ್ತಾಂತರಿಸಿ ನಾವು ಸೈಪ್ರಸ್‌ನಲ್ಲಿ ಗೌರವದ ಸ್ಥಾನ ನೀಡುವದಾಗಿ ತಮ್ಮ ಕೋಪ - ನೋವನ್ನು ವ್ಯಕ್ತಪಡಿಸಿದ್ದರು. ಈ ವೇಳೆಗಾಗಲೇ ಹಲವಷ್ಟು ವರ್ಷಗಳೂ ಸರಿದು ಹೋಗಿದ್ದವು. ಈ ಅವಧಿಯಲ್ಲಿ ದೇಹ ಎಲ್ಲಿರುತ್ತದೆ ಎಂಬ ಪ್ರಶ್ನೆ ಮೂಡಿದಾಗ ಸೈಪ್ರಸ್‌ನಿಂದ ಮೃತದೇಹವನ್ನು ರವಾನಿಸಿದಾಗ ಅದನ್ನು ವಿಶೇಷ ರೀತಿಯಲ್ಲಿ ಪ್ಯಾಕಿಂಗ್ ಮಾಡಲಾಗಿದೆ. ಹಲವು ವರ್ಷಗಳು ಕಳೆದರೂ ದೇಹ ನಶಿಸಿ ಹೋಗದು ಎಂಬ ವಿಚಾರ ಅರುಹಿದ ಈ ಅಧಿಕಾರಿ ಇಲ್ಲಿನ ಅಧಿಕಾರಿಗಳಿಂದ ಸೂಕ್ತ ಭರವಸೆ ಪಡೆದು ಹಿಂತಿರುಗಿದ್ದರು.

ಸಾರ್ವಜನಿಕ ಒತ್ತಡ

ಈ ವಿಚಾರ ಬಯಲಾದ ಬೆನ್ನಲ್ಲೇ ಸಾರ್ವಜನಿಕವಾಗಿ ಈ ಕುರಿತು ಒತ್ತಡ ವ್ಯಕ್ತಗೊಳ್ಳತೊಡಗಿತ್ತು. ಬಳಿಕ ಸೇನೆ ಹಾಗೂ ಸರಕಾರದ ತೀರ್ಮಾನದಂತೆ ವಿಲ್ಸನ್‌ಗಾರ್ಡನ್ ಸ್ಮಶಾನದಿಂದ ಶವಪೆಟ್ಟಿಗೆಯನ್ನು ಹೊರತೆಗೆಯುವ ನಿರ್ಧಾರಕ್ಕೆ ಬರಲಾಯಿತು. ಇದರಂತೆ ಅವಶೇಷವನ್ನು ಹೊರತೆಗೆದು ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಭಾರತೀಯ ಸೇನೆಗೆ ಸಂಬAಧಿಸಿದ ಎ.ಎಸ್.ಸಿ. ಸೆಂಟರ್‌ಗೆ ಇದನ್ನು ಅಲಂಕೃತ ಮಿಲಿಟರಿ ವಾಹನದಲ್ಲಿ ಭಾರೀ ಮೆರವಣಿಗೆ ಸಹಿತವಾಗಿ ಕೊಂಡೊಯ್ದು ಮತ್ತೊಮ್ಮೆ ಗೌರವಯುತವಾಗಿ ಮಣ್ಣು ಮಾಡಲಾಗಿದೆ. ನಂತರದಲ್ಲಿ ಇದೇ ಸ್ಥಳದಲ್ಲಿ ತಿಮ್ಮಯ್ಯ ಅವರ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಇದಾದ ಬಳಿಕ ವರ್ಷಂಪ್ರತಿ ತಿಮ್ಮಯ್ಯ ಜನ್ಮದಿನವಾದ ಮಾರ್ಚ್ ೩೧ ರಂದು ಎ.ಎಸ್.ಸಿ. ಸೆಂಟರ್‌ನ ಮೂಲಕ ಹಾಗೂ ಬೆಂಗಳೂರು ಕೊಡವ ಸಮಾಜದ ಮೂಲಕ ಈ ಸ್ಥಳದಲ್ಲಿ ತಿಮ್ಮಯ್ಯ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಸೇನಾ ಗೌರವವನ್ನೂ ನೀಡಲಾಗುತ್ತಿದೆ ಎಂಬುದು ಇತಿಹಾಸವಾಗಿದೆ.

ಓರ್ವ ಜನರಲ್ ಆಗಿದ್ದವರ ಮೃತದೇಹವನ್ನು ಮತ್ತೆ ಹೊರತೆಗೆದು ಈ ರೀತಿಯಲ್ಲಿ ಮತ್ತೆ ಮಣ್ಣು ಮಾಡಿರುವ ಇತಿಹಾಸ ದೇಶದಲ್ಲಿ ಇವರೊಬ್ಬರದ್ದೇ ಆಗಿದೆ ಎಂದು ಮೆರವಣಿಗೆ ಸಂದರ್ಭದಲ್ಲಿ ಆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಕೊಡಗಿನವರಾದ ನಿವೃತ್ತ ಎ.ಸಿ.ಪಿ. ಬಿ.ಬಿ. ಅಶೋಕ್‌ಕುಮಾರ್ ಹೇಳುತ್ತಾರೆ.

ಪ್ರತಿಮೆಯಲ್ಲಿರುವದು...

ಎ.ಎಸ್.ಪಿ. ಸೆಂಟರ್‌ನಲ್ಲಿರುವ ಪ್ರತಿಮೆಯ ಕೆಳಭಾಗದಲ್ಲಿ ‘‘ಎ ಪ್ರೂವನ್ ಸೋಲ್ಜರ್ ಇನ್ ದಿ. ಬ್ಯಾಟಲ್‌ಫೀಲ್ಡ್... ಎ ಸೋಲ್ಜರ್ ಈಜ್ ಜನರಲ್ ಎ ಮ್ಯಾನ್ಸ್ ಮ್ಯಾನ್... ದ ಆರ್ಮಿ ಹಿಸ್ ಸೋಲ್ ಹಿಸ್ ಸೋಲ್ ದ ಆರ್ಮಿ ಜ|| ಕೆ.ಎಸ್. ತಿಮ್ಮಯ್ಯ ಪದ್ಮಭೂಷಣ’’ ಎಂದು ಬರೆಯಲಾಗಿದೆ.

ಇದೀಗ ಮತ್ತೊಂದು ಹೆಮ್ಮೆ

ಇಂತಹ ಧೀಮಂತ ವ್ಯಕ್ತಿತ್ವದ ಸೇನಾನಿಯ ಗೌರವವಾಗಿ ಅವರ ತವರು ಜಿಲ್ಲೆಯಲ್ಲಿ ಅವರು ಜನ್ಮ ತಳೆದ ನಿವಾಸದಲ್ಲಿ ಇದೀಗ ತಲೆ ಎತ್ತಿರುವ ಸ್ಮಾರಕ ಭವನ ತಿಮ್ಮಯ್ಯ ಯಶೋಗಾಥೆಗೆ ಮತ್ತೊಂದು ಸಾಕ್ಷಿಯಾಗಿದ್ದು, ತಾ. ೬ ರಂದು (ಇಂದು) ದೇಶದ ರಾಷ್ಟçಪತಿಗಳಿಂದ ಉದ್ಘಾಟನೆಗೊಳ್ಳುತ್ತಿರುವದು ಮತ್ತೊಂದು ಹಿರಿಮೆಯಾಗಿದೆ.

- ಕಾಯಪಂಡ ಶಶಿ ಸೋಮಯ್ಯ