ಮಡಿಕೇರಿ, ಫೆ. ೫: ಬೆಂಗಳೂರಿನಲ್ಲಿ ಕಳೆದ ರಾತ್ರಿ ನಡೆದ ರಸ್ತೆ ಅವಘಡವೊಂದರಲ್ಲಿ ಜಿಲ್ಲೆಯ ಯುವಕನೋರ್ವ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಮೂಲತಃ ಹುದಿಕೇರಿಯ ನಿವಾಸಿ ಬೆಂಗಳೂರಿನ ವಿವೇಕ್ ನಗರದಲ್ಲಿ ನೆಲೆಸಿರುವ ಹೊಟ್ಟೇಂಗಡ ಸುಜಯ್ ಹಾಗೂ ಗೀತಾ ದಂಪತಿಯ ಪುತ್ರ ಸುಮನ್ ಸುಬ್ಬಯ್ಯ ಮೃತಪಟ್ಟಿರುವ ಯುವಕ. ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಇಂದಿರಾನಗರದ ಬಳಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದ ಸಂದರ್ಭ ಈತ ಕಾರಿನಿಂದ ಹೊರಗೆ ಹಾರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಇಂದು ನಡೆಯಿತು.