ಶ್ರೀಮಂಗಲ, ಫೆ. ೫: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ರೈತರೋರ್ವರ ಹಸುವನ್ನು ಗುರುವಾರ ರಾತ್ರಿ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ಗ್ರಾಮದ ಮಲ್ಲೇಂಗಡ ಪಿ. ಧನಂಜಯ ಅವರಿಗೆ ಸೇರಿದ ಗಬ್ಬದ ಹಸುವನ್ನು ಹುಲಿ ಕೊಟ್ಟಿಗೆಯಿಂದ ಸುಮಾರು ೫೦ ಅಡಿ ದೂರ ಎಳೆದೊಯ್ದು ಕೊಂದು ಸ್ವಲ್ಪ ಭಾಗವನ್ನು ತಿಂದಿದೆ.
ಪೊರಾಡು ಗ್ರಾಮದಲ್ಲಿ ತಾ. ೨ ರಂದು ಹಾಡಹಗಲೇ ಬೆಳೆಗಾರ ಬಲ್ಯಮೀದೇರಿರ ವಿಜಯಪ್ರಸಾದ್ ಅವರ ತೋಟದಲ್ಲಿ ಹುಲಿ ಕಾಣಿಸಿಕೊಂಡಿತು. ತೋಟ ಕೆಲಸ ನಿಮಿತ್ತ ವಿಜಯಪ್ರಸಾದ್ ಅವರ ಪುತ್ರ ೧೪ ವರ್ಷದ ಪ್ರತೀಕ್ ಪೊನ್ನಣ್ಣ ಅವರು ೫ ಅಡಿ ಅಂತರದಲ್ಲಿ ಹುಲಿಯನ್ನು ಎದುರಾಗಿದ್ದರು. ಹುಲಿ ಮಲಗಿದ ಸ್ಥಿತಿಯಲ್ಲಿ ಇದ್ದುದ್ದರಿಂದ ಹುಲಿಗೆ ಬಾಲಕ ಕಾಣಿಸದೆ ಅಪಾಯದಿಂದ ಪಾರಾಗಿದ್ದರು. ಇದೀಗ ಹುಲಿ ಪ್ರತ್ಯಕ್ಷವಾದ ಸ್ಥಳದಿಂದ ಸುಮಾರು ೨ ಕಿ.ಮೀ. ದೂರದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿದ ಘಟನೆ ನಡೆದಿದೆ.
ಸ್ಥಳಕ್ಕೆ ಪೊನ್ನಂಪೇಟೆ ಆರ್.ಎಫ್.ಓ. ರಾಜಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ಮಾಡಿ ಪರಿಹಾರ ನೀಡುವುದರೊಂದಿಗೆ ಹುಲಿಯನ್ನು ಗ್ರಾಮದಿಂದ ಅರಣ್ಯಕಟ್ಟುವ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸ್ಥಳಕ್ಕೆ ರೈತ ಸಂಘದ ಮುಖಂಡರಾದ ಮಲ್ಲೇಂಗಡ ಶಶಿ, ಮಲ್ಲೇಂಗಡ ಸನ್ನಿ, ಕಾಯಪಂಡ ಮದುಮೋಟಯ್ಯ, ಬಲ್ಯಮೀದೇರಿರ ಸಂಪತ್, ಮೀದೇರಿರ ಕುಟ್ಟಪ್ಪ, ಅಣ್ಣೀರ ವಿಜುಪೂಣಚ್ಚ ತೆರಳಿ ಸಂತಸ್ತ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.