ಮಡಿಕೇರಿ, ಜ. ೨೭: ದಿಢೀರ್ ಬೆಳವಣಿಗೆಯೊಂದರಲ್ಲಿ ತೊಡಿಕಾನದಿಂದ ಕರಿಕೆಗೆ ಕೆಲವು ಸ್ಥಳೀಯರು ಸೇರಿ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ಅರಣ್ಯ ವಿಭಾಗದ ನಿಯಂತ್ರಣಕ್ಕಾಗಿ ಉಪಯೋಗಿಸುತ್ತಿರುವ ‘ಪೆಟ್ರೋಲಿಂಗ್’ ರಸ್ತೆಯನ್ನೇ ಕೆಲವು ಸ್ಥಳೀಯರು ವಿಸ್ತಾರಗೊಳಿಸಿ ಮಣ್ಣು ತೆಗೆದು ರಸ್ತೆ ಕಾರ್ಯವನ್ನು ನಿನ್ನೆಯಿಂದ ಆರಂಭಿಸಿದ್ದಾರೆ. ಆದರೆ, ತಲಕಾವೇರಿ ವನ್ಯಧಾಮ ಪ್ರದೇಶದಲ್ಲಿ ಈ ರೀತಿ ಸಾರ್ವಜನಿಕ ರಸ್ತೆ ನಿರ್ಮಾಣ ಮಾಡುವುದಕ್ಕೆ ಜಿಲ್ಲೆಯ ‘ವೈಲ್ಡ್ ಲೈಫ್ ಫಸ್ಟ್’ ಪರಿಸರ ಸಂಸ್ಥೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ೨೦೧೮ರಲ್ಲಿ ಈ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಯೋಜನೆಯೊಂದನ್ನು ಕೈಗೊಂಡಾಗ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಲಿಖಿತ ದೂರು ಸಲ್ಲಿಸಿತ್ತು. ಆದರೆ ಇದೀಗ ವನ್ಯಜೀವಿ ಕಾನೂನನ್ನು ಉಲ್ಲಂಘಿಸಿ ಕೆಲವರು ರಸ್ತೆ ನಿರ್ಮಾಣ ಮಾಡುತ್ತಿರುವದು ಅನಧಿಕೃತವಾಗಿದೆ ಎಂದು ಸಂಸ್ಥೆಯ ತಮ್ಮು ಪೂವಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ತೊಡಿಕಾನದಿಂದ ಕರಿಕೆಗೆ ಇದು ಸನಿಹದ ಮಾರ್ಗವಾಗುತ್ತದೆ ಎಂದು ಸ್ಥಳೀಯ ಕೆಲವರು ಈ ಕಾರ್ಯ ವನ್ನು ಅನುಮತಿ ರಹಿತವಾಗಿ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ಅಭಿಪ್ರಾಯ ಬಯಸಿದಾಗ; ಈ ಪ್ರದೇಶದಲ್ಲಿ ದೇವಾಲಯವೊಂದಿದೆ. ಈ ದೇವಾಲಯಕ್ಕೆ ತೆರಳಲು ಸ್ಥಳೀಯರು ರಸ್ತೆ ನಿರ್ಮಾಣ ಮಾಡುತ್ತಿರುವ ಕುರಿತು ಹೇಳಲಾಗಿದೆ. ಅವರು ಯಾವದೇ ಜೆ.ಸಿ.ಬಿ. ಯಂತ್ರ ಬಳಸಿಲ್ಲ.
(ಮೊದಲ ಪುಟದಿಂದ) ಈ ಹಿಂದೆ ಇಲ್ಲಿನ ನಿವಾಸಿಗಳು ತಾರು ರಸ್ತೆಯನ್ನೇ ನಿರ್ಮಾಣ ಮಾಡಲು ಶಾಶ್ವತವಾದ ದಾರಿಯನ್ನು ಕಲ್ಪಿಸಲು ಮನವಿ ಮಾಡಿದ್ದಾಗ ಇಲಾಖೆಯಿಂದ ವನ್ಯಜೀವಿ ಕಾಯ್ದೆ ಅನ್ವಯ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಖಚಿತಪಡಿಸಲಾಗಿತ್ತು. ಈ ವಿಭಾಗದಲ್ಲಿ ಶಾಶ್ವತವಾದ ರಸ್ತೆ ನಿರ್ಮಾಣ ಅಸಾಧ್ಯ ಆದರೂ ಅರಣ್ಯ ಸಿಬ್ಬಂದಿ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವದೆಂದು ಅಧಿಕಾರಿ ಸ್ಪಷ್ಟಪಡಿಸಿದರು.