ಹೊಸ ಮಾರ್ಗಸೂಚಿ: ಥಿಯೇಟರ್ ಭರ್ತಿಗೆ ಅವಕಾಶ
ನವದೆಹಲಿ, ಜ. ೨೭: ದೇಶದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಥಿಯೇಟರ್ ಭರ್ತಿಗೆ ಅವಕಾಶ ನೀಡಿದೆ. ಈ ಹಿಂದೆ ಗೃಹ ಸಚಿವಾಲಯ (ಎಂಹೆಚ್ಎ) ಹೊರಡಿಸಿದ್ದ ಮಾರ್ಗಸೂಚಿಗಳು ಜನವರಿ ೩೧ ಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆ ಕೇಂದ್ರ ಸರ್ಕಾರ ಇಂದು ಹೊಸದಾಗಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಈ ಮಾರ್ಗಸೂಚಿ ಫೆ. ೨೮ ರವರೆಗೆ ಅನ್ವಯಿಸಲಿದೆ. ಹೊಸ ಮಾರ್ಗಸೂಚಿಗಳಲ್ಲಿ, ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು (ಯುಟಿ) ಎಚ್ಚರಿಕೆ ವಹಿಸಲು ಒತ್ತು ನೀಡುವಂತೆ ಮತ್ತು ಕಣ್ಗಾವಲು, ನಿಯಂತ್ರಣ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ. ಹಿಂದಿನAತೆ, ಕೋವಿಡ್-೧೯ ಸೂಕ್ತ ನಡವಳಿಕೆಗಳ ಪಾಲನೆ, ಮಾಸ್ಕ್ಗಳು, ಕೈ ತೊಳೆಯುವುದು, ಸಾಮಾಜಿಕ ದೂರ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ನಿರ್ದೇಶಿಸಲಾಗಿದೆ.
ನಾಳೆಯಿಂದ ಜಂಟಿ ಅಧಿವೇಶನ
ಬೆಂಗಳೂರು, ಜ. ೨೭: ತಾ. ೨೮ ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಿಲಿದ್ದು, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮಹತ್ವದ ಸಂದೇಶವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರವಾನಿಸಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆ ರಾಜ್ಯಪಾಲರನ್ನು ಭೇಟಿ ಮಾಡಿ ಜಂಟಿ ಅಧಿವೇಶನಕ್ಕೆ ಆಗಮಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ-ಉಪಸಭಾಪತಿ ಆಯ್ಕೆ
ಬೆಂಗಳೂರು, ಜ. ೨೭: ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಚುನಾವಣೆಯಲ್ಲಿ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಮೈತ್ರಿ ಮಾಡಿಕೊಂಡಿದ್ದು, ಸಭಾಪತಿ ಸ್ಥಾನವನ್ನು ಜೆ.ಡಿ.ಎಸ್.ನ ಬಸವರಾಜ್ ಹೊರಟ್ಟಿ ಅವರಿಗೆ ಹಾಗೂ ಉಪಸಭಾಪತಿ ಸ್ಥಾನಕ್ಕೆ ಬಿ.ಜೆ.ಪಿ.ಯ ಪ್ರಾಣೇಶ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ತಾ. ೨೮ ರಂದು (ಇಂದು) ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.