*ಗೋಣಿಕೊಪ್ಪ, ಜ. ೨೮: ಜನರು ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ನೂತನವಾಗಿ ಆಯ್ಕೆಯಾದ ಗ್ರಾ.ಪಂ. ಸದಸ್ಯರುಗಳಿಗೆ ಸಲಹೆ ನೀಡಿದರು.

ನಿಟ್ಟೂರು ಶಕ್ತಿ ಕೇಂದ್ರ ಆಯೋಜಿಸಿದ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಕ್ಷಭೇದ ಮರೆತು ನಾವು ಜನರ ಸೇವೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ಜನರ ಸೇವಕರಾಗಿ ಕರ್ತವ್ಯ ನಿಭಾಯಿಸಿ ನಂಬಿಕೆಗಳಿಸಿಕೊಳ್ಳಿ ಎಂದು ಈ ಸಂದರ್ಭ ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ೮ ಸ್ಥಾನವನ್ನು ಬಿಜೆಪಿ ಗಳಿಸಿಕೊಂಡು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಮತ್ತೊಂದು ಕ್ಷೇತ್ರದ ಅಭ್ಯರ್ಥಿಯ ಬಿಜೆಪಿಗೆ ಸೇರುವ ಮೂಲಕ ಬಲವನ್ನು ಗಟ್ಟಿಗೊಳಿಸಿದ್ದಾರೆ.

ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಸರ್ಕಾರದ ಮೂಲಕ ಬೇಡಿಕೆಗೆ ಅನುಗುಣವಾಗಿ ಒದಗಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ನೊಂದ ಜನರ ಧ್ವನಿಯಾಗಿ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಯಾವುದೇ ಅಪಸ್ವರಗಳು ಕೇಳಿ ಬರದಂತೆ ಜನತೆಯ ಭರವಸೆಗಳನ್ನು ಈಡೇರಿಸುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸಲು ಸದಸ್ಯರು ಒಗ್ಗಟ್ಟಿನ ಬಲ ಪ್ರದರ್ಶಿಸಬೇಕು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಗ್ರಾಮದ ಜನರಿಗೆ ಒದಗಿಸಿಕೊಡಲು ಪಂಚಾಯಿತಿ ಮತ್ತು ಶಾಸಕರ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ನಿಟ್ಟೂರು ಶಕ್ತಿ ಕೇಂದ್ರದ ಪ್ರಮುಖ ಕಾಟಿಮಾಡ ಶರೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಖಜಾಂಚಿ ಗುಮ್ಮಟಿರಾ ಕಿಲನ್ ಗಣಪತಿ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ಪ್ರವೀಣ್, ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣಗಣಪತಿ, ಅವರುಗಳು ನೂತನವಾಗಿ ಆಯ್ಕೆ ಯಾದ ಚೆಕ್ಕೆರ ಸೂರ್ಯ ಅಯ್ಯಪ್ಪ, ಕಾಟಿಮಾಡ ಶರಿನ್, ಅಮ್ಮಣಿ, ಜೆ.ಕೆ. ವಾಸು, ಪಡಿಞ್ಜರಂಡ ಕವಿತಾಪ್ರಭು, ಅಳಮೇಂಗಡ ಪವಿತರಮೇಶ್, ಅಮ್ಮಣಿ, ಎರವರ ರಾಜು ಜೆ.ಎ., ಸುಮತಿ ಇವರುಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಸುಮತಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಆರ್.ಎಂ.ಸಿ. ಸದಸ್ಯ ಸುಜಾ ಪೂಣಚ್ಚ, ನಿಟ್ಟೂರು ಶಕ್ತಿ ಕೇಂದ್ರದ ಸಹ ಪ್ರಮುಖ್ ಅಳಮೇಂಗಡ ಸುರೇಶ್ ಸುಬ್ಬಯ್ಯ ಕೊಟ್ಟಗೇರಿ ಬೂತ್ ಅಧ್ಯಕ್ಷ ಮೋಹನ್ ಚಂಗಪ್ಪ, ಕೃಷಿ ಮೋರ್ಚಾ ಅಧ್ಯಕ್ಷ ಅಶೋಕ್ ಹಾಗೂ ಕಾರ್ಯಕರ್ತರು ಹಾಜರಿದ್ದರು.