ಮಡಿಕೇರಿ, ಜ. ೨೮: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಕೊಡಗು ಶಾಖೆ ವತಿಯಿಂದ ನಡೆಯುತ್ತಿರುವ ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸೆ ಯೋಜನೆಯಡಿ ಇತ್ತೀಚೆಗೆ ನಗರದ ಬಾಲಭವನದಲ್ಲಿ ಮಡಿಕೇರಿ ತಾಲೂಕಿನ ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎನ್. ಆನಂದ್ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಶೇಷಚೇತನರಿಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಸಂತಸ ತಂದಿದೆ ಎಂದರು.
ಪ್ರತಿಯೊಬ್ಬ ವಿಶೇಷಚೇತನರು ಯುಡಿಐಡಿ ಕಾರ್ಡ್ ಮಾಡಿಸಿಕೊಳ್ಳುವಂತೆ ಹಾಗೂ ಇದರಿಂದ ಸರ್ಕಾರದ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
೩೬ ವಿಶೇಷಚೇತನರುಗಳಿಗೆ ವಾಕರ್, ವಾಕಿಂಗ್ ಸ್ಟಿಕ್, ಎಲ್ಬೋ ಕ್ರಚ್ಚಸ್, ವೀಲ್ ಚೇರ್, ಏರ್ ಬೆಡ್, ವೈಟ್ ಕೇನ್ ಮತ್ತು ಆಕ್ಸುಲರಿ ಕ್ರಚ್ಚಸ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಸಭಾಪತಿ ಬಿ.ಕೆ. ರವೀಂದ್ರ ರೈ, ರೋಟರಿ ಮಿಸ್ಟಿ ಹಿಲ್ಸ್ನ ಉಪಾಧ್ಯಕ್ಷ ಧನಂಜಯ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಯೋಜನಾ ನಿರ್ದೇಶಕ ಜಯಕುಮಾರ್ ಕೆ. ಭಾಗವಹಿಸಿದ್ದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಂಕಾಚಾರಿ, ಬೋರಯ್ಯ, ಪ್ರಸಾದ್, ಅಭಿಲಾಷ್ ಮತ್ತು ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.