ಸೋಮವಾರಪೇಟೆ,ಜ.೨೭: ಇಲ್ಲಿನ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಜೆ.ಡಿ.ಎಸ್.ನ ಜಯಂತಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಪಂಚಾಯಿತಿಯ ೧೦ನೇ ವಾರ್ಡ್ನಿಂದ ಜಯಗಳಿಸಿದ್ದ ಜಯಂತಿ ಶಿವಕುಮಾರ್ ಅವರು, ಪ.ಪಂ. ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ಸ್ಥಾಯಿ ಸಮಿತಿಗೆ ನೇಮಕಗೊಂಡರು. ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಮುಂದಿನ ಒಂದು ವರ್ಷದ ಅವಧಿಯ ಸ್ಥಾಯಿ ಸಮಿತಿಗೆ ಜಯಂತಿ ಶಿವಕುಮಾರ್ ಅವರ ಹೆಸರನ್ನು ಕಾಂಗ್ರೆಸ್‌ನ ಶೀಲಾ ಡಿಸೋಜ ಸೂಚಿಸಿದರೆ, ಬಿ.ಜೆ.ಪಿ.ಯಿಂದ ಶುಭಾಕರ್ ಅವರ ಹೆಸರನ್ನು ಬಿ.ಆರ್. ಮಹೇಶ್ ಸೂಚಿಸಿದರು.

ಒಂದು ಸ್ಥಾನಕ್ಕೆ ಈರ್ವರ ಹೆಸರು ಬಂದಿದ್ದರಿAದ ಉಳಿದ ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಮುಖ್ಯಾಧಿಕಾರಿ ನಾಚಪ್ಪ ಸೂಚಿಸಿದರು. ಜಯಂತಿ ಶಿವಕುಮಾರ್ ಪರವಾಗಿ ಉಪಾಧ್ಯಕ್ಷ ಕಾಂಗ್ರೆಸ್‌ನ ಬಿ.ಸಂಜೀವ, ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಉದಯಶಂಕರ್ ಹಾಗೂ ಜೆ.ಡಿ.ಎಸ್.ನ ಜೀವನ್, ಜಯಂತಿ, ನಾಗರತ್ನ ಸೇರಿದಂತೆ ಏಳು ಮಂದಿ ಕೈಎತ್ತಿದರು.ಬಿ.ಜೆ.ಪಿ ಪರವಾಗಿ ನಳಿನಿ ಗಣೇಶ್, ಪಿ.ಕೆ. ಚಂದ್ರು, ಶುಭಾಕರ್, ಬಿ.ಆರ್. ಮಹೇಶ್ ಸೇರಿದಂತೆ ನಾಲ್ವರು ಮಂದಿ ಇದ್ದುದರಿಂದ ಜಯಂತಿ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆ ಯಾದರು. ೧೧ ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ೪, ಬಿಜೆಪಿ ೪ ಹಾಗೂ ಜೆಡಿಎಸ್ ೩ ಬಲಾಬಲ ಹೊಂದಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಚುನಾವಣಾ ಪೂರ್ವ ಮೈತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲೂ ಮುಂದುವರೆಯಿತು.

ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾದ ಎಸ್.ಮಹೇಶ್, ಶರತ್‌ಚಂದ್ರ, ಅಭಿಯಂತರ ಹೇಮಂತ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ವಿಷಯ ಸಂಗ್ರಾಹಕಿ ರೂಪಾ ಮಹೇಂದ್ರಕುಮಾರ್, ಅಕೌಂಟೆAಟ್ ಭಾವನಾ ಉಪಸ್ಥಿತರಿದ್ದರು.