ಸೋಮವಾರಪೇಟೆ, ಜ. ೨೬: ಮದ್ಯ ಸೇವಿಸಿದ್ದ ವ್ಯಕ್ತಿಯೋರ್ವರು ರಸ್ತೆ ಬದಿಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ನಡೆದಿದ್ದು, ಮದ್ಯದೊಂದಿಗೆ ವಿಷ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಲೇಕಟ್ಟೆ ರಸ್ತೆಯ ಸಿದ್ದೇಶ್ವರ ಟಯರ್ ವರ್ಕ್ಸ್ ಸಮೀಪದ ನಿವಾಸಿ, ಪ್ಲಂಬಿAಗ್ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ (೩೬) ಎಂಬವರೇ ಸಾವನ್ನಪ್ಪಿದವರಾಗಿದ್ದು, ಕಳೆದ ಕೆಲ ಸಮಯದಿಂದ ಮನೆಗೆ ತೆರಳದೇ ಮದ್ಯ ಸೇವನೆ ಮಾಡಿ ರಸ್ತೆ ಬದಿಯ ಅಂಗಡಿಗಳ ಎದುರು ಮಲಗುತ್ತಿದ್ದರು ಎನ್ನಲಾಗಿದೆ. ನಿನ್ನೆ ದಿನ ಮನೆಗೆ ತೆರಳಿ ತಾನು ವಿಷ ಸೇವಿಸುವದಾಗಿ ಹೇಳಿದ್ದು, ಮನೆಯವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಿನ್ನೆ ರಾತ್ರಿಯೂ ಅಂಗಡಿಯ ಎದುರು ಮಲಗಿದ್ದ ಶ್ರೀನಿವಾಸ್‌ನನ್ನು, ಇಂದು ಬೆಳಿಗ್ಗೆ ಅಂಗಡಿ ಮಾಲೀಕರು ಹೊರ ಕಳುಹಿಸಿದ್ದು, ಮಧ್ಯಾಹ್ನದ ಸಮಯದಲ್ಲಿ ನಾಮರಾಜ್ ಎಂಬವರಿಗೆ ಸೇರಿದ ಜಾಗದಲ್ಲಿ ಮಲಗಿದ್ದ ಸಂದರ್ಭ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಮೃತ ಶ್ರೀನಿವಾಸ್ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.