ಗೋಣಿಕೊಪ್ಪ ವರದಿ, ಜ. ೨೬: ಹಾಕಿಕೂರ್ಗ್ ವತಿಯಿಂದ ನಡೆದ ಪಾಲಂದೀರ ಅಪ್ಪಯ್ಯ ಜ್ಞಾಪಕಾರ್ಥದ ೩ ನೇ ವರ್ಷದ ಮಹಿಳಾ ಹಾಕಿ ಲೀಗ್‌ನ ಟ್ರೋಫಿಯನ್ನು ಪವಿನ್ ಪೊನ್ನಣ್ಣ ಫೌಂಡೇಷನ್ ತಂಡ ಗೆದ್ದುಕೊಂಡಿದ್ದು, ಕೋರಲ್ ವಾಟರ್ಸ್ ತಂಡ ದ್ವಿತೀಯ ಸ್ಥಾನ ಅಲಂಕರಿಸಿದೆ.
ಮಂಗಳವಾರ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ನಡುವೆ ನಡೆದ ಫೈನಲ್‌ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ೧-೦ ಗೋಲುಗಳ ಅಂತರದಿAದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯದ ೧೮ ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಪೂಜಿತಾ ಮಿಂಚು ಹರಿಸಿದರು. ಇದು ಫಲಿತಾಂಶಕ್ಕೂ ಕಾರಣವಾಯಿತು. ಕೋರಲ್ ವಾಟರ್ಸ್ಗೆ ದೊರೆತ ಪೆನಾಲ್ಟಿ ಕಾರ್ನರ್ ಉಪಯೋಗವಾಗಲಿಲ್ಲ. ಉಭಯ ತಂಡಗಳು ಉತ್ತಮ ಆಟ ಪ್ರದರ್ಶನ ನೀಡಿದವು.
ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳ ಪುತ್ತರಿ ಕೋಲಾಟ್, ಕೊಡವ ಆಟ್, ಪರೆಯಕಳಿ ಪ್ರದರ್ಶನ ಗಮನ ಸೆಳೆಯಿತು.
ಬೆಸ್ಟ್ ಗೋಲ್ ಕೀಪರ್ ಬಹುಮಾನವನ್ನು ಎವರ್ ಸ್ಟೋನ್ ತಂಡದ ಪ್ರೇಕ್ಷಿಕಾ, ಭವಿಷ್ಯದ ಆಟಗಾರ್ತಿಯಾಗಿ ಕೋರಲ್ ವಾಟರ್ಸ್ ತಂಡದ ಅದಿರಾ, ಉತ್ತಮ ಆಟಗಾರ್ತಿಯಾಗಿ ಪಿಪಿಎಫ್ ತಂಡದ ಅಂಜಲಿ ಬಹುಮಾನ ಪಡೆದುಕೊಂಡರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಂಡAಡ ದೇಚಮ್ಮ, ಕೋಮಲಾ, ಕೃತಿಕಾ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.
ತೀರ್ಪುಗಾರರಾಗಿ ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ತಾಂತ್ರಿಕ ವರ್ಗದಲ್ಲಿ ಅರುಣ್, ವಿನೋದ್, ಕೌಶಿಕ್ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ, ಅಜ್ಜಮಾಡ ಪೊನ್ನಪ್ಪ ವೀಕ್ಷಕ ವಿವರಣೆ ನೀಡಿದರು.
ಲೋಪಮುದ್ರಾ ಆಸ್ಪತ್ರೆ ವೈದ್ಯೆ ಡಾ. ಮುಕ್ಕಾಟೀರ ಸೌಮ್ಯ ನಾಣಯ್ಯ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡಾಪಟುಗಳು ನೈತಿಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಮುಂದುವರಿಯಬೇಕಿದೆ. ಶಿಸ್ತು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಎಂದು ಸಲಹೆ ನೀಡಿದರು. ಈ ಸಂದರ್ಭ ಹಾಕಿ ಆಟಗಾರ್ತಿ ಅಜ್ಜಿಕುಟ್ಟೀರ ಸೀಮಾ ಭೀಮಯ್ಯ, ದಾನಿ ಪಾಲಂದೀರ ಪಾರ್ವತಿ ಅಪ್ಪಯ್ಯ, ಹಾಕಿ ಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚೆಂಗಪ್ಪ, ಉಪಾಧ್ಯಕ್ಷೆ ಯಮುನಾ ಚೆಂಗಪ್ಪ ಇತರರಿದ್ದರು.