ಬದಮನೆ ಅಬ್ಬಿ ಜಲಪಾತದಲ್ಲಿ ಭೂಕುಸಿತ: ವಿದ್ಯಾರ್ಥಿಯ ಜೀವನ್ಮರಣ ಹೋರಾಟ

ಬೆಳ್ತಂಗಡಿ, ಜ. ೨೬: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಮಲವಂತಿಗೆ ಗ್ರಾಮದ ಬದಮನೆ ಅಬ್ಬಿ ಜಲಪಾತದಲ್ಲಿ ಗುಡ್ಡವೊಂದು ಹಠಾತ್ತನೆ ಕುಸಿದ ಕಾರಣ ಉಜಿರೆಯ ವಿದ್ಯಾರ್ಥಿಯೊಬ್ಬ ಮಣ್ಣಿನ ರಾಶಿಯಲ್ಲಿ ಸಿಲುಕಿಕೊಂಡಿದ್ದಾನೆ. ನಿನ್ನೆ ನಡೆದ ಘಟನೆಯಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ, ಲೈಲಾ ಗ್ರಾಮದ ಕಾಶಿಬೆಟ್ಟು ಕೃಷ್ಣಯ್ಯ ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ (೨೧) ಮಣ್ಣಿನ ರಾಶಿಯಲ್ಲಿ ಸಿಲುಕಿಕೊಂಡಿದ್ದಾನೆ. ಭೂಕುಸಿತ ಸಂಭವಿಸಿದಾಗ ಸ್ಥಳದಲ್ಲಿದ್ದ ಅವರ ಸ್ನೇಹಿತರಾದ ಆದಿತ್ಯ, ಸೌರಭ್ ಮತ್ತಿತರರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಉಜಿರೆಯಲ್ಲಿ ನೆಲೆಸಿರುವ ಸನತ್ ಶೆಟ್ಟಿ ಭಾನುವಾರ ಕ್ರಿಕೆಟ್ ಆಡಲು ಸಂಸ್ಥೆಯಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಸೋಮವಾರ ಮಧ್ಯಾಹ್ನ ಅಬ್ಬಿ ಜಲಪಾತಕ್ಕೆ ಭೇಟಿ ನೀಡಿ ನಂತರ ಉಜಿರೆಗೆ ಮರಳಬೇಕಾಗಿತ್ತು. ಸನತ್ ಹಾಗೂ ಆತನ ಮೂವರು ಸ್ನೇಹಿತರು ಅಬ್ಬಿ ಜಲಪಾತದಲ್ಲಿ ಸಮಯ ಕಳೆದ ನಂತರ ಹಿಂದಿರುಗುತ್ತಿದ್ದಾಗ, ಭೂಕುಸಿತದ ದೊಡ್ಡ ಶಬ್ದ ಕೇಳಿಸಿದೆ. ನಾಲ್ವರೂ ಓಡಲು ಪ್ರಾರಂಭಿಸಿದಾಗ ಎಲ್ಲರಿಂದ ಹಿಂದಿದ್ದ ಸನತ್ ಒಂದು ದೊಡ್ಡ ಬಂಡೆ ಮತ್ತು ಮಣ್ಣಿನ ರಾಶಿಯಡಿಯಲ್ಲಿ ಸಿಲುಕಿಕೊಂಡಿದ್ದಾನೆ. ಈ ಘಟನೆ ಮಧ್ಯಾಹ್ನ ೧೨.೩೦ ರಿಂದ ೧.೩೦ ರವರೆಗೆ ಸಂಭವಿಸಿದೆ. ಮಣ್ಣು ಮತ್ತು ಬಂಡೆಯ ರಾಶಿ ೧೫ ಅಡಿ ಪ್ರದೇಶದಲ್ಲಿ ಹರಡಿದೆ. ಸನತ್‌ನ ರಕ್ಷಣೆಗಾಗಿ ಯಾವುದೇ ಯಂತ್ರಗಳನ್ನು ಅಲ್ಲಿಗೆ ಕೊಂಡೊಯ್ಯುವುದು ಸಹ ಕಷ್ಟಕರವಾಗಿದೆ.

ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸೂಚನೆ

ನವದೆಹಲಿ, ಜ. ೨೬: ಕೊರೊನಾ ವಿರುದ್ಧ ದೇಶದಲ್ಲಿ ನೀಡಲಾಗುತ್ತಿರುವ ೨ ಲಸಿಕೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ಮತ್ತು ಭಾರತೀಯ ದಂಡ ಸಂಹಿತೆ ೧೮೬೦ರ ಅಡಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದೆ ಎಂದು ತಿಳಿದುಬಂದಿದೆ. ಸುಳ್ಳು ಸುದ್ದಿಗೆ ಓಗೊಟ್ಟು ದೇಶದಾದ್ಯಂತ ಲಸಿಕೆ ಪಡೆಯಲು ಸ್ವತಃ ಆರೋಗ್ಯ ಕಾರ್ಯಕರ್ತರೇ ಹಿಂದು ಮುಂದು ನೋಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಈ ಕುರಿತು ರಾಜ್ಯ ಸರ್ಕಾರಗಳಿಗೆ ಪತ್ರ ಬರದಿರುವ ಕೇಂದ್ರ ಗೃಹ ಸಚಿವಾಲಯ ಮುಖ್ಯ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಲಸಿಕೆ ಸಾಮರ್ಥ್ಯ ಹೊಂದಿದೆ ಎಂದು ಸ್ವತಃ ಔಷಧಗಳ ಕುರಿತ ರಾಷ್ಟಿçÃಯ ನಿಯಂತ್ರಣಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಆದರೂ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

೨ನೇ ಹಂತದಲ್ಲಿ ಮುಖ್ಯಮಂತ್ರಿ, ಸಚಿವರು, ಕಲಾವಿದರಿಗೆ ಲಸಿಕೆ: ಸಚಿವ ಸುಧಾಕರ್

ಬೆಂಗಳೂರು, ಜ. ೨೬: ೨ನೇ ಹಂತದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಪುಟ ಸಚಿವರು, ನಟ-ನಟಿಯರು ಹಾಗೂ ಧಾರ್ಮಿಕ ನಾಯಕರಿಗೆ ಲಸಿಕೆ ನೀಡಲಾಗುತ್ತದೆ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. ಲಸಿಕೆ ಅಭಿಯಾನಕ್ಕೆ ಉತ್ತೇಜನ ನೀಡುವ ಪ್ರಭಾವಿ ವ್ಯಕ್ತಿಗಳಿಗೆ ಲಸಿಕೆ ಹಾಕಲು ಅವಕಾಶ ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸುಮಾರು ೫೦೦ ಜನಪ್ರಿಯ ವ್ಯಕ್ತಿಗಳಿಗೆ ಲಸಿಕೆ ಹಾಕಲು ಅನುಮತಿ ನೀಡುವೆಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದೇವೆ. ಲಸಿಕೆ ಸುರಕ್ಷತೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಇದು ಸಹಾಯಕವಾಗಲಿದೆ. ಪ್ರಭಾವಿ ವ್ಯಕ್ತಿಗಳ ಮೂಲಕ ಜನರು ಲಸಿಕೆ ಪಡೆದುಕೊಳ್ಳಲು ಪ್ರೇರೇಪಿತರಾಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.