ಸುಂಟಿಕೊಪ್ಪ, ಜ. ೨೬: ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ಶಿಶು ಯೋಜನಾಧಿಕಾರಿ ಸಿ.ಎಂ.ಅಣ್ಣಯ್ಯ ಅವರು, ಪ್ರತಿಯೊಬ್ಬ ಗರ್ಭಿಣಿ ಮತ್ತು ಬಾಣಂತಿಯರು ಪೂರಕ ಪೌಷ್ಠಿಕ ಆಹಾರಗಳನ್ನು ಬಳಸುವಂತೆ ತಿಳಿಸಿದರು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಂ. ಗಿರೀಶ್ ಮಾತನಾಡಿ, ಮಕ್ಕಳಿಗೆ ಸಮರ್ಪಕವಾದ ಪೌಷ್ಠಿಕ ಆಹಾರ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದೊರೆಯುತ್ತದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ನೆರೆದವರಿಗೆ ಮನವರಿಕೆ ಮಾಡಿಕೊಟ್ಟರು.
ಮಕ್ಕಳ ಸಹಾಯವಾಣಿ ಕಾರ್ಯಕರ್ತೆ ಬಿ.ಕೆ.ಕುಮಾರಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ್ಯ ವಿವಾಹದ ದುಷ್ಪಾರಿಣಾಮಗಳ ಮಾಹಿತಿ ನೀಡಿ, ಬಾಲ್ಯ ವಿವಾಹ ಮಾಡಿಕೊಂಡರೆ ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ ತಿಳಿಸಿದರು.
ಕೊಡಗರಹಳ್ಳಿ ಜಿಯಂಪಿ ಶಾಲೆಯ ಶಿಕ್ಷಕಿ ಸುಮನ ಅವರು, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ, ಮಕ್ಕಳ ಸಹಾಯವಾಣಿಯ ದಮಯಂತಿ, ಯೋಗೇಶ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆ ಎಸ್.ಎನ್.ಸಾವಿತ್ರಿ, ಅಂಗನವಾಡಿ ಸಹಾಯಕಿಯರು ಇದ್ದರು