ಮಡಿಕೇರಿ, ಜ. ೨೫ : ೧೫ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ೫೦ ವರ್ಷ ಪೂರೈಸಿದ ಹಿನ್ನೆಲೆ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲಾಗುವುದು. ತಾ.೨೯ ಹಾಗೂ ೩೦ ರಂದು ಸಮ್ಮೇಳನ ನಡೆಯಲಿದ್ದು, ವಿವಿಧ ವಿಚಾರ ಗೋಷ್ಠಿ, ಪರ್ಯಾಯ ವೇದಿಕೆಯಲ್ಲಿ ಕವಿಗೋಷ್ಠಿ, ಯುವ ಕವಿಗೋಷ್ಠಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ.೨೮ ರಂದು ಕುಶಾಲನಗರದಲ್ಲಿ ನಿರ್ಮಿಸಿರುವ ವಿ.ಎಸ್ ರಾಮಕೃಷ್ಣ ದ್ವಾರ, ಶಿರಂಗಾಲದ ಕಟ್ಟೆ ಕಾಳೇಗೌಡ್ರು ದ್ವಾರ, ಶನಿವಾರಸಂತೆಯ ಗಂಗಪ್ಪ ಕರ್ಕೇರ ದ್ವಾರ, ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ದ್ವಾರ, ಕರಿಕೆಯಲ್ಲಿ ಬೇಕಲ್ ಸೋಮನಾಥ್ ದ್ವಾರ, ಕೊಡ್ಲಿಪೇಟೆಯಲ್ಲಿ ಚಿಕ್ಕವೀರಪ್ಪ ದ್ವಾರ, ಪರಶುರಾಮ ದ್ವಾರ, ಮಾಕುಟ್ಟದಲ್ಲಿ ರಘುನಾಥ್ ನಾಯಕ್ ದ್ವಾರ, ಕುಟ್ಟದಲ್ಲಿ ಬಾಚಮಾಡ ಗಣಪತಿ ದ್ವಾರ, ಆನೆಚೌಕೂರು ಬಾಚಮಾಡ ಡಿ ಸುಬ್ಬಯ್ಯ ದ್ವಾರ, ಮಾಲ್ದಾರೆಯಲ್ಲಿ ರೆವರೆಂಡ್ ಜಾರ್ಜ್ ಫರ್ಡಿನೆಂಟ್ ಕಿಟ್ಟೆಲ್ ದ್ವಾರವನ್ನು ಗಣ್ಯರು ಉದ್ಘಾಟಿಸಲಿದ್ದಾರೆ.

ಸುವರ್ಣ ಸಂಭ್ರಮದಲ್ಲಿ ಕ.ಸಾ.ಪಕ್ಕೆ ದುಡಿದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಹೋಬಳಿ ಅಧ್ಯಕ್ಷರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ನಯನ ಕಶ್ಯಪ್ (ಸಾಹಿತ್ಯ), ಮಾಧ್ಯಮ ಸ್ಪಂದನ ತಂಡ (ಸಮಾಜ ಸೇವೆ), ಪುಂಗೋಡಿ ಚಂದ್ರಶೇಖರ್ ನಾಯಕ್ (ಯಕ್ಷಗಾನ), ರಾಮ್ ಗೌತಮ್ (ಚಿತ್ರಕಲೆ), ರತ್ನಾಕರ್ (ಶಿಕ್ಷಣ), ಅನಿಲ್ ಹೆಚ್.ಟಿ (ಮಾಧ್ಯಮ), ಪಟ್ಟೇಮನೆ ನವನೀತ್ (ಕ್ರೀಡೆ), ಹೊಸೂರು ಸತೀಶ್ ಕುಮಾರ್ (ಸಹಕಾರ), ಕಾವೇರಿ ಕಲಾ ಪರಿಷತ್ (ಕಲಾ ಸಂಸ್ಥೆ), ಮುತ್ತಪ್ಪ (ಜೀವ ರಕ್ಷಕ), ರಮೇಶ್ ನಾಣಚ್ಚಿ ಹಾಡಿ (ಬುಡಕಟ್ಟು ಜನಪದ), ಚಂದ್ರಕಲಾ (ಜಾನಪದ), ಮಂಜುನಾಥ್ ಕಣಿವೆ (ನಾಟಿ ವೈದ್ಯ), ಗಣೇಶ್ ಚಿಕ್ಕಳುವಾರ (ರಂಗಭೂಮಿ), ಮಹೇಶ್ ದೇವರು (ರಕ್ಷಣೆ ಸೇವೆ), ಆರ್.ಕೆ ಬಾಲಚಂದರ್ (ಯುವಜನ ತರಬೇತಿ), ಡಾ.ಸೂರ್ಯಕುಮಾರ್ (ವೈದ್ಯಕೀಯ), ಡಾ.ಕಾಳಿಮಾಡ ಕೆ. ಶಿವಪ್ಪ (ಸಂಗೀತ), ಎಂ.ಟಿ ಬೇಬಿ (ಕೃಷಿ), ತೂಕ್ ಬೊಳಕ್ ಸಾಹಿತ್ಯ ಅಕಾಡೆಮಿ (ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ), ಆಶಾ ಸತೀಶ್ (ರಂಗೋಲಿ ವಿನ್ಯಾಸ), ಕೇಟೋಳಿರ ಫ್ಯಾನ್ಸಿ ಗಣಪತಿ (ಗುಡಿ ಕೈಗಾರಿಕೆ), ಜಿ.ಟಿ ದಿವಾಕರ್ (ಹೈನುಗಾರಿಕೆ), ರಾಮ (ಪೌರಕಾರ್ಮಿಕ) ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.

ಕೋವಿಡ್ ನಿಯಮದನ್ವಯ ಕಾರ್ಯಕ್ರಮ ನಡೆಸಲಾಗುವುದು. ಸುಮಾರು ೨ ಸಾವಿರ ಕನ್ನಡಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದೆ ಎಂದರು. ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಕ.ಸಾ.ಪ ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ, ಜಿಲ್ಲಾ ನಿರ್ದೇಶಕರಾದ ಕೋಡಿ ಚಂದ್ರಶೇಖರ್, ಧನಂಜಯ್ ಇದ್ದರು.