ಸೋಮವಾರಪೇಟೆ, ಜ. ೨೫: ಶಾಂತಳ್ಳಿ ಗಾ.ಪಂ.ಯ ಅಭಿವೃದ್ಧಿ ಅಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ವೃಥಾ ಅಲೆದಾಡಿಸುತ್ತಿ ದ್ದಾರೆ ಎಂದು ಆರೋಪಿಸಿ ಇವರನ್ನು ತಕ್ಷಣ ವರ್ಗಾವಣೆ ಮಾಡಿ, ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್‌ಕುಮಾರ್ ಹಾಗೂ ಹಾಲಿ ಸದಸ್ಯ ತ್ರಿಶೂಲ್, ಪ್ರಮುಖರಾದ ಪ್ರಕಾಶ್ ಅವರುಗಳ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆರೋಪಗಳ ಸುರಿಮಳೆಗೈದರು.
ಸಾರ್ವಜನಿಕ ಕೆಲಸ ಕಾರ್ಯ ಗಳಿಗೆ ಹಣದ ಬೇಡಿಕೆ ಒಡ್ಡುತ್ತಿರುವ ಪಿಡಿಓ ರಾಜೇಂದ್ರ ಅವರನ್ನು ಕೆಲಸದಿಂದಲೇ ವಜಾ ಮಾಡಬೇಕು. ಇವರ ಅಕ್ರಮಗಳ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿ ಕಾರಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳಿಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಇಲಾಖೆಯ ಮೇಲಧಿಕಾರಿಗಳ ಬಗ್ಗೆಯೂ ಸಂಶಯ ಮೂಡುವಂತಾ ಗಿದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಆರೋಪಿಸಿದರು.
ಶಾಂತಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಡ ರೈತರು ತಮ್ಮ ಜಾನುವಾರುಗಳಿಗೆ ಕೊಟ್ಟಿಗೆ ನಿರ್ಮಿಸಲು ಮುಂದಾಗಿದ್ದು, ಇವರುಗ ಳಿಂದಲೂ ಹಣ ಪಡೆಯಲಾಗಿದೆ. ಆದರೆ ಈವರೆಗೆ ಬಿಲ್ ಮಾಡಿಲ್ಲ ಎಂದು ಗ್ರಾ.ಪಂ. ಸದಸ್ಯ ತ್ರಿಶೂಲ್ ದೂರಿದರು.
ದನದ ಕೊಟ್ಟಿಗೆ ನಿರ್ಮಾಣಕ್ಕೆ ಅಭಿಮಠ ಬಾಚಳ್ಳಿಯ ಎಂ.ಯು. ಧರ್ಮಪ್ಪ ಅವರಿಂದ ೧,೫೦೦, ಶಾಂತಳ್ಳಿಯ ಎಂ.ಇ. ಚಂಗಪ್ಪ ಅವರಿಂದ ೨೫೦೦, ಕೆ.ಕೆ. ರಮೇಶ್ ಅವರಿಂದ ೨ ಸಾವಿರ, ಹಿರಣಯ್ಯ ಅವರಿಂದ ೧೫೦೦, ವಸತಿ ಯೋಜನೆ ಯಡಿ ಮನೆ ಮಂಜೂರಾತಿಗೆ ತಲ್ತರೆಶೆಟ್ಟಳ್ಳಿಯ ಪ್ರೇಮಾ ರಮೇಶ್ ಅವರಿಂದ ೧೫೦೦, ಕುಸುಮಾವತಿ ಅವರಿಂದ ೨ ಸಾವಿರ ಹೀಗೆ ಸಾರ್ವಜನಿಕರಿಂದ ಹಣ ವಸೂಲಾತಿ ಮಾಡಲಾಗಿದೆ ಎಂದು ಪ್ರತಿಭಟನಾಕಾ ರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ.ಪಂ.ಗೆ ಇಂಟರ್‌ನೆಟ್ ಸಂಪರ್ಕಕ್ಕೆ ಮೀಸಲಿಟ್ಟ ಹಣವನ್ನೂ ಪಾವತಿಸದ ಹಿನ್ನೆಲೆ ಕಳೆದ ೧ ವಾರದಿಂದ ಪಂಚಾಯಿತಿಗೆ ಇಂಟರ್ ನೆಟ್ ಇಲ್ಲದಂತಾಗಿದೆ. ಇದರಿಂದಾಗಿ ಪಂಚಾಯಿತಿಯಲ್ಲಿ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಅನಿಲ್ ಆರೋಪಿಸಿದರು.
ಗ್ರಾಮದ ವಿಶುಕುಮಾರ್ ಮಾತನಾಡಿ, ಪಿಡಿಓ ಅವರಿಂದಾಗಿ ನಮಗೆ ಸರ್ಕಾರದಿಂದ ಮಂಜೂ ರಾಗಿದ್ದ ಮನೆಯೂ ಇಲ್ಲವಾಗಿದೆ. ನಮ್ಮಿಂದ ಹಣ ಪಡೆದರೂ ಒಮ್ಮೆಯೂ ಜಾಗಕ್ಕೆ ಭೇಟಿ ನೀಡಿ ಫೋಟೋ ತೆಗೆದಿಲ್ಲ. ಇದೀಗ ಮಂಜೂರಾಗಿದ್ದ ಮನೆ ವಾಪಸ್ ಹೋಗಿದ್ದು, ನಮಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡರು.
ಹಣ ನೀಡಿದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ, ‘ನಮ್ಮಿಂದ ಹಣ ಪಡೆದರೂ ನಮ್ಮ ಕೆಲಸ ಮಾಡಿಕೊಟ್ಟಿಲ್ಲ. ಪಿಡಿಓ ಅವರನ್ನು ಸ್ಥಳಕ್ಕೆ ಕರೆಸಿ; ನಾವೇ ವಿಚಾರಿಸಿಕೊಳ್ಳುತ್ತೇವೆ’ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಯಲ್ಲಿ ಪಟ್ಟು ಹಿಡಿದರು.
ಈ ಸಂದರ್ಭ ದೂರವಾಣಿ ಮೂಲಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು, ತಕ್ಷಣದಿಂದಲೇ ಶಾಂತಳ್ಳಿಗೆ ನೂತನ ಪಿಡಿಓ ನೇಮಕ ಮಾಡಲಾಗುವದು. ಪಿಡಿಓ ವಿರುದ್ಧ ತನಿಖೆಗೆ ಶಿಫಾರಸ್ಸು ಮಾಡುವದಾಗಿ ತಿಳಿಸಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಹರಗ ಶರಣ್, ಶಾಂತಳ್ಳಿಯ ಬಿದ್ದಪ್ಪ, ರಾಜಪ್ಪ, ಶಾಂತಪ್ಪ, ರೋಹಿತ್, ಈರಪ್ಪ, ಸಂಧ್ಯಾ, ಕುಸುಮಾವತಿ, ಪ್ರೇಮಾ ಸೇರಿದಂತೆ ಇತರರು ಭಾಗವಹಿಸಿದ್ದರು.