*ಕೊಡ್ಲಿಪೇಟೆ, ಜ. ೨೫ : ಇಲ್ಲಿನ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಮತ್ತು ಪ್ಲಾಂರ‍್ಸ್ ಕ್ಲಬ್ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೋಬಳಿ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಮುಗಿದು ೩ ತಿಂಗಳಾಗಿ ದ್ದರೂ ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಪ್ರಸ್ತುತ ರೈತ ಸಂಪರ್ಕ ಕೇಂದ್ರ ಕೊಡ್ಲಿಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಬಾಡಿಗೆ ಆಧಾರ ದಲ್ಲಿ ಕಾರ್ಯಾಚರಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣ ಕ್ಕಾಗಿ ಪೈಸಾರಿ ಜಾಗವನ್ನು ಕೃಷಿ ಇಲಾಖೆಗೆ ನೀಡಲಾಗಿತ್ತು.
ಈ ಸ್ಥಳದಲ್ಲಿ ಕೆ.ಆರ್.ಐ.ಡಿ.ಎಲ್.ನಿಂದ ನೂತನ ಕಟ್ಟಡ ನಿರ್ಮಿಸಿ ಮೂರು ತಿಂಗಳು ಕಳೆದರೂ ಇಂದಿಗೂ ಉದ್ಘಾಟನೆಯಾಗಿಲ್ಲ. ಮಳೆ ಹಾಗೂ ಕೊರೊನಾ ಲಾಕ್‌ಡೌನ್‌ನಿಂದಾಗಿ ಆಮೆಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ಕಳೆದ ೬ ತಿಂಗಳ ಹಿಂದೆ ವೇಗ ದೊರಕಿತ್ತು. ಮೂರು ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸ ಲಾಗಿತ್ತು. ಕಾಮಗಾರಿ ಪೂರ್ಣ ಗೊಂಡಿದ್ದರೂ ಸಹ ರೈತ ಸಂಪರ್ಕ ಕೇಂದ್ರದ ಆಡಳಿತವನ್ನು ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂದು ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಸಂಶಯ ಮೂಡುತ್ತಿದೆ. ಕಿಟಕಿ ಹಾಗೂ ಬಾಗಿಲುಗಳು ಗುಣಮಟ್ಟದಿಂದ ಕೂಡಿಲ್ಲ. ಮಳೆಗಾಲದಲ್ಲಿ ನೀರು ಹರಿಯಲು ಚರಂಡಿ ನಿರ್ಮಿಸಿಲ್ಲ ಎಂದು ಕೊಡ್ಲಿಪೇಟೆ ವ್ಯಾಪ್ತಿಯ ರೈತ ಮುಖಂಡರು ಆರೋಪಿಸಿದ್ದಾರೆ.
ಹೋಬಳಿ ರೈತ ಸಂಪರ್ಕ ಕೇಂದ್ರವಾಗಿದ್ದರೂ ಸಿಬ್ಬಂದಿಗಳ ಕೊರತೆ ಎದುರಿಸುವಂತಾಗಿದೆ. ಖಾಯಂ ಹೋಬಳಿ ಅಧಿಕಾರಿ ಇಲ್ಲದೇ ರೈತರಿಗೆ ಸಮಸ್ಯೆಯಾಗು ತ್ತಿದೆ. ವಾರಕ್ಕೊಮ್ಮೆ ಉಸ್ತುವಾರಿ ಅಧಿಕಾರಿ ಭೇಟಿ ನೀಡುತ್ತಿದ್ದರೂ ಕೃಷಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂದು ಕೃಷಿಕರು ದೂರಿದ್ದಾರೆ. ಕಚೇರಿಯಲ್ಲಿ ಓರ್ವ ಸಹಾಯಕರಿದ್ದು, ಹೋಬಳಿ ಯಾದ್ಯಂತ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ಖಾಯಂ ಕೃಷಿ ಅಧಿಕಾರಿ ಸೇರಿದಂತೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಲು ಇಲಾಖೆಯ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.