ಸಿದ್ದಾಪುರ, ಜ. ೨೩: ಸಿದ್ದಾಪುರದ ಪ್ರಥಮ ಆಟೋ ಚಾಲಕಿ ಇದೀಗ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದಲ್ಲಿರುವ ಏಕೈಕ ಮಹಿಳಾ ಆಟೋ ಚಾಲಕಿ ಸುಜಾತ ಎಂಬವರು ತಾವೇ ಆಟೋ ಚಾಲನೆಯನ್ನು ಕಲಿತು ಸ್ವಯಂ ಉದ್ಯೋಗದ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ನೆಲ್ಲಿಹುದಿಕೇರಿಯ ನಲ್ವತ್ತೇಕರೆ ಬರಡಿಯಲ್ಲಿ ವಾಸವಿರುವ ಸುಜಾತ (೩೮) ಎಂಬವರು ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನಲ್ವತ್ತೇಕರೆ-ಬರಡಿ ಕ್ಷೇತ್ರದಿಂದ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರತಿಸ್ಪರ್ಧಿಗಿಂತಲೂ ೧೨೫ಕ್ಕೂ ಅಧಿಕ ಅಂತರ ಮತಗಳಿಂದ ವಿಜಯಶಾಲಿಯಾಗಿದ್ದಾರೆ.

ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಗ್ರಾಮದಲ್ಲಿ ಬಡ ವರ್ಗದ ಕುಟುಂಬಗಳಿಗೆ ವಸತಿ ಯೋಜನೆ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.