ಆಲೂರು-ಸಿದ್ದಾಪುರ, ಜ. ೨೩: ಹಿಂದೂ ಮಲೆಯಾಳಿ ಜನಾಂಗ ದವರು ಸಮಾಜದಲ್ಲಿ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಮುಂದಿರಬೇಕು, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ [ಎಸ್‌ಎನ್‌ಡಿಪಿ] ಕೊಡಗು ಜಿಲ್ಲಾ ಅಧ್ಯಕ್ಷ ವಿ.ಕೆ. ಲೋಕೇಶ್ ಕರೆ ನೀಡಿದರು. ಪಟ್ಟಣದ ಬಸಪ್ಪ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಎಸ್‌ಎನ್‌ಡಿಪಿ ಶನಿವಾರಸಂತೆಯ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲೆಯಾಳಿ ಸಮುದಾಯದ ಬಾಂಧವರ ಅಭಿವೃದ್ಧಿಗೆ ಸಂಘಟನೆಯ ಅವಶ್ಯಕತೆ ಯಿದ್ದು, ಸಂಘಟನೆಯ ಬಲವರ್ಧನೆ ಯಿಂದ ಮಾತ್ರ ಎಲ್ಲವನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಎಸ್‌ಎನ್‌ಡಿಪಿ ಜಿಲ್ಲಾ ಉಪಾಧ್ಯಕ್ಷ ರಾಜನ್ ಮಾತನಾಡಿ, ಸಮುದಾಯದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ವಿದ್ಯಾವಂತರಾಗಬೇಕು. ಆ ಮೂಲಕ ಸಂಘಟನೆಯನ್ನು ಅಭಿವೃದ್ಧಿಗೊಳಿಸ ಬಹುದು ಎಂದರು.
ಇದೇ ಸಂದರ್ಭ ಶನಿವಾರಸಂತೆಯ ಎಸ್‌ಎನ್‌ಡಿಪಿ ಶಾಖೆಯ ಅಧ್ಯಕ್ಷ ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ನಿರ್ದೇಶಕರು ಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನೆಯ ಗಿರೀಶ್, ಆನಂದ್, ಸತೀಶ್, ಪಿ.ಕೆ. ಗಂಗಾಧರ್, ಸುಕುಮಾರ್, ವಿಜಯ್ ಮುಂತಾದ ವರು ಹಾಜರಿದ್ದರು. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಿಂದೂ ಮಲೆಯಾಳಿ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.