ಕೊಡ್ಲಿಪೇಟೆ, ಜ. ೨೩: ಕೊಡ್ಲಿಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ೨೧ ನೇ ಶಾಖೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಲೋಕಾರ್ಪಣೆ ಗೊಳಿಸಿದರು.
ನಂತರ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಹಕಾರ ಕ್ಷೇತ್ರ ಬಲಿಷ್ಠವಾಗಿದ್ದು, ಇದಕ್ಕೆ ಮುಖ್ಯ ಕಾರಣ ಜಿಲ್ಲೆಯ ಜನರು. ಹೊರಗಿನವರಿಗೆ ಸಾಲ ನೀಡಿದರೆ ವಸೂಲಾತಿಗೆ ಸಮಸ್ಯೆಯಾಗುವ ಮೂಲಕ ಸಹಕಾರ ಕ್ಷೇತ್ರಕ್ಕೂ ತೊಂದರೆಯಾಗಲಿದೆ. ಸಹಕಾರ ಕ್ಷೇತ್ರ ಇನ್ನಷ್ಟು ಬಲಗೊಳ್ಳಬೇಕಾದರೆ ಜಿಲ್ಲೆಯ ಸದಸ್ಯರುಗಳಿಗೆ ಮಾತ್ರ ಸಾಲ ಸೌಲಭ್ಯ ನೀಡಿ ಎಂದು ಸಲಹೆಯಿತ್ತರು.
ಬ್ಯಾಂಕಿನ ಸಿಬ್ಬಂದಿಗಳು ಗ್ರಾಹಕರೊಂದಿಗೆ ಸೌಮ್ಯತೆಯಿಂದ ವ್ಯವಹರಿಸಬೇಕು. ಬ್ಯಾಂಕ್ ಉಳಿದು ಬೆಳೆಯಬೇಕಾದರೆ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ಡಿ.ಸಿ.ಸಿ.ಬ್ಯಾಂಕ್ ೧೯೨೧ ರಲ್ಲಿ ಸ್ಥಾಪನೆಗೊಂಡಿದ್ದು, ೨೦೨೧ರ ಪ್ರಸಕ್ತ ವರ್ಷ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ ನೆನಪಿಗಾಗಿ ಶತಮಾನೋತ್ಸವ ಶಾಖೆ ಮತ್ತು ಕಟ್ಟಡವನ್ನು ಕೊಡ್ಲಿಪೇಟೆಯಲ್ಲಿ ಸ್ಥಾಪಿಸಲಾಗಿದೆ. ಹಿರಿಯ ಸಹಕಾರಿಗಳ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಯ ಫಲವಾಗಿ ಜಿಲ್ಲಾ ಕೇಂದ್ರ ಬ್ಯಾಂಕು ಹೆಮ್ಮರವಾಗಿ ಬೆಳೆದಿದೆ. ಮುಂದಿನ ಜೂನ್ ತಿಂಗಳಿನಲ್ಲಿ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಸಾಲ ಮನ್ನಾ ಯೋಜನೆಯಡಿ ಬ್ಯಾಂಕಿನ ಮೂಲಕ ರೈತರಿಗೆ ಸೌಲಭ್ಯ ಒದಗಿಸಿದ್ದು, ಸರಕಾರದಿಂದ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ಬರಲು ಬಾಕಿ ಇದೆ. ಈ ಬಗ್ಗೆ ಜಿಲ್ಲೆಯ ಶಾಸಕರುಗಳು ಗಮನಹರಿಸಬೇಕೆಂದು ಮನವಿ ಮಾಡಿದರು.
ಬ್ಯಾಂಕಿನ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಡಿ.ಸಿ.ಸಿ. ಬ್ಯಾಂಕ್ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರ ಕುಟುಂಬದವರೇ ಅಧ್ಯಕ್ಷರಾಗಿರುವುದು ವಿಶೇಷ. ಕೊರೊನಾ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಜಿಲ್ಲೆಗೆ ಬರಬೇಕಾದ ಸಾಲ ಮನ್ನಾದ ಬಾಕಿ ಹಣವನ್ನು ಸರಕಾರ ಹಾಗೂ ಹಣಕಾಸು ಇಲಾಖೆಯೊಂದಿಗೆ ವ್ಯವಹರಿಸಿ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದರು.ನಗದು ಕೌಂಟರ್ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಸಹಕಾರ ಕ್ಷೇತ್ರ ಉಳಿಯಬೇಕಾದರೆ ಸದಸ್ಯರುಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಸಾಲದ ಹಣವನ್ನು ಉದ್ದೇಶಿತ ಕಾರ್ಯಕ್ಕೆ ಬಳಸುವ ಮೂಲಕ ಆರ್ಥಿಕ ಪ್ರಗತಿ ಕಾಣುವಂತಾಗಬೇಕು ಎಂದರು.
ಬ್ಯಾAಕಿನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಕೆ.ಚಿಣ್ಷಪ್ಪ ಮಾತನಾಡಿ, ಕೊಡ್ಲಿಪೇಟೆ ಭಾಗದ ಜನರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸೇವೆಗಳು ಸುಲಭವಾಗಿ ಲಭ್ಯವಾಗಬೇಕೆಂಬ ಉದ್ದೇಶದಿಂದ ನೂತನ ಶಾಖೆಯನ್ನು ಪ್ರಾರಂಭಿಸ ಲಾಗಿದ್ದು, ಸದಸ್ಯರುಗಳು ಇದರ ಸೇವೆಯನ್ನು ಬಳಸಿಕೊಳ್ಳಬೇಕು ಎಂದರು.
ಸಮಾರAಭದಲ್ಲಿ ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಎಸ್.ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಎಸ್.ಬಿ. ಭರತ್ ಕುಮಾರ್, ಬಿ.ರಘು ನಾಣಯ್ಯ, ಎಂ .ರಮೇಶ್, ಹೊಸೂರು ಸತೀಶ್ ಕುಮಾರ್, ಎ. ಜಗದೀಶ್, ಉಷಾ ತೇಜಸ್ವಿ, ಅರುಣ್ ಭೀಮಯ್ಯ, ಚಾರ್ಟರ್ಡ್ ಅಕೌಂಟೆAಟ್ ಎ. ಗೋಪಾಲಕೃಷ್ಣ, ಪ್ರಧಾನ ವ್ಯವಸ್ಥಾಪಕ ಕೆ.ಕೆ. ಪೂವಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.