ಜೈ ಶ್ರೀರಾಮ್ ಘೋಷಣೆ: ಭಾಷಣ ಮಾಡದೆ ತೆರಳಿದ ಸಿಎಂ ಮಮತಾ ಬ್ಯಾನರ್ಜಿ

ಕೊಲ್ಕತ್ತಾ, ಜ. ೨೩: ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಭಾಷಣ ಮಾಡಲು ಆಗಮಿಸಿದ್ದು ಈ ವೇಳೆ ಅಲ್ಲಿದ್ದವರೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರಿಂದ ದೀದಿ ಭಾಷಣ ಮಾಡದೆ ತೆರಳಿದ್ದಾರೆ. ನೇತಾಜಿ ಸುಭಾಷ್ ಚಂದ್ರಬೋಸ್‌ರ ೧೨೫ ಜನ್ಮದಿನಾಚರಣೆಯ ಅಂಗವಾಗಿ ದೇಶಾದ್ಯಂತ ಪರಾಕ್ರಮ ದಿನ ಎಂದು ಆಚರಿಸಲಾಗುತ್ತಿದೆ. ಇನ್ನು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿಯನ್ನು ಭಾಷಣ ಮಾಡಲು ಆಹ್ವಾನಿಸಲಾಗಿತ್ತು. ಅವರು ಮೈಕ್ ಮುಂದೆ ಬರುತ್ತಿದ್ದಂತೆ ಅಲ್ಲಿದ್ದ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಇದರಿಂದ ಬೇಸರಗೊಂಡ ಮಮತಾ ಬ್ಯಾನರ್ಜಿ ಅವರು, ನಿಮ್ಮ ವರ್ತನೆ ಖಂಡಿಸಿ ನಾನು ಭಾಷಣ ಮಾಡುವುದಿಲ್ಲ. ಭಾಷಣ ಮಾಡಲು ಕರೆಸಿ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಇದು ಸರ್ಕಾರಿ ಕಾರ್ಯಕ್ರಮ. ಯಾವುದೇ ಒಂದು ಪಕ್ಷದ ಕಾರ್ಯಕ್ರಮವಲ್ಲ ಎಂದು ಹೇಳಿ ನಿರ್ಗಮಿಸಿದರು.

ಅಕ್ರಮ ಗಣಿಗಾರಿಕೆಗೆ ಯಡಿಯೂರಪ್ಪ ಕುಮ್ಮಕ್ಕು : ಸಿದ್ದರಾಮಯ್ಯ ಆರೋಪ

ಬೆಂಗಳೂರು, ಜ. ೨೩: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ಅವರ ಕುಮ್ಮಕ್ಕು ಕಾರಣ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ? ಎಂದು ಪ್ರಶ್ನಿಸಿದರು.

ಎಎಪಿ ಶಾಸಕ ಸೋಮನಾಥ ಭಾರ್ತಿಗೆ ೨ ವರ್ಷ ಜೈಲು ಶಿಕ್ಷೆ!

ನವದೆಹಲಿ, ಜ. ೨೩: ೨೦೧೬ರಲ್ಲಿ ಏಮ್ಸ್ ನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬAಧಿಸಿದAತೆ ದೆಹಲಿ ಕೋರ್ಟ್ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿಯನ್ನು ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ ಶನಿವಾರ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೇ ಪ್ರಕರಣಕ್ಕೆ ಸಂಬAಧಿಸಿ ದೆಹಲಿ ಕೋರ್ಟ್ ಇತರ ನಾಲ್ವರನ್ನು ಆರೋಪಮುಕ್ತಗೊಳಿಸಿತ್ತು. ನಿನ್ನೆ ಆದೇಶ ಹೊರಡಿಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ, ಆರೋಪಿ ಸೋಮನಾಥ್ ಭಾರ್ತಿ ವಿರುದ್ಧ ಆರೋಪಕ್ಕೆ ಸಂಬAಧಪಟ್ಟAತೆ ಐಪಿಸಿ ಸೆಕ್ಷನ್ ೧೪೯ರಡಿ ಅಪರಾಧಿ ಎಂದು ಸಾಬೀತಾಗಿದೆ. ೧೯೮೪ರ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ ೩ರಡಿ ಸೇರಿದಂತೆ ಹಲವು ಕಾಯ್ದೆಗಳಡಿಯಲ್ಲಿ ಸಹ ಸೋಮ ಭಾರ್ತಿ ಅಪರಾಧಿ ಎಂದು ಸಾಬೀತಾಗಿದೆ ಎಂದರು. ಸೆಪ್ಟೆಂಬರ್ ೯, ೨೦೧೬ರಲ್ಲಿ ಏಮ್ಸ್ನ ಮುಖ್ಯ ಭದ್ರತಾ ಅಧಿಕಾರಿ ಆರ್ ಎಸ್ ರಾವತ್ ದೆಹಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಶಾಸಕ ಭಾರ್ತಿ ಮತ್ತು ಅವರ ಬೆಂಬಲಿಗರು ಏಮ್ಸ್ ನ ಭದ್ರತಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದರು. ಅಂದು ಸರ್ಕಾರದ ಆಸ್ತಿಯ ಬೇಲಿಯನ್ನು ಹಾನಿ ಮಾಡಲು ಪ್ರಚೋದನೆ ನೀಡಿದ್ದರು ಎಂದು ದೂರು ನೀಡಿದ್ದರು.

ಎಇಇ ಮನೆ ಮೇಲೆ ಎಸಿಬಿ ದಾಳಿ : ಅಪಾರ ಪ್ರಮಾಣದ ಆಸ್ತಿ ಪತ್ತೆ

ಬೆಂಗಳೂರು, ಜ. ೨೩: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದ್ದು ಕೋಟಿ ಮೌಲ್ಯದ ನಗನಾಣ್ಯಗಳು ಪತ್ತೆಯಾಗಿದೆ. ಅಧಿಕಾರಿ ಅಂಜನಪ್ಪ ಎಸಿಬಿ ಬಲೆಗೆ ಬಿದ್ದಿದ್ದಾನೆ. ದಾವಣಗೆರೆ ತಾಲೂಕು ಲೋಕಿಕೆರೆ ಮೂಲದವರಾಗಿದ್ದು ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ೩೫ ಲಕ್ಷ ನಗದು, ೭೪೧ ಗ್ರಾಂ ಚಿನ್ನ ಸೇರಿದಂತೆ ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಲ್ಲದೆ ಇಂದೂ ದಾಳಿ ಮುಂದುವರಿದಿದ್ದು ಒಟ್ಟೂ ೧.೨ ಕೆಜಿ ಚಿನ್ನ,೯ ಕೆಜಿ ಬೆಳ್ಳಿ,೫.೮೦ ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು, ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಪೈಕಿ ಬೆಂಗಳೂರಿನ ಮನೆಯಲ್ಲಿ ೪೨ ಲಕ್ಷ ಮೌಲ್ಯದ ವಸ್ತುಗಳು ಸಿಕ್ಕರೆ ಲೋಕಿಕೆರೆಯಲ್ಲಿ ೨,೨೬,೩೯,೦೦೦ ಮೌಲ್ಯದ ಆಸ್ತಿ ಪತ್ರ ಹಾಗೂ ೮ ಕೆಜಿ ಬೆಳ್ಳಿ ಹಾಗೂ ೫ ಗ್ರಾಂ ಚಿನ್ನ ದೊರಕಿದೆ.

ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲುವೆಗೆ ಬಿದ್ದು ಮೂವರ ದುರ್ಮರಣ

ಹುಬ್ಬಳಿ, ಜ. ೨೩: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ನಗರದ ಕಿರೇಸೂರು ಬಳಿಯ ಮಲಪ್ರಭಾ ಕಾಲುವೆಯಲ್ಲಿ ನಡೆದಿದೆ. ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿಯಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ನೀರುಪಾಲಾದ ಮೂವರಿಗಾಗಿ ಪೊಲೀಸರು ಮತ್ತು ಕಿರೇಸೂರು ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಘಟನೆ ವೇಳೆ ನತಾಶಾ ಬಂಡಾರಿ ಹಾಗೂ ಸಲ್ಮಾನ್ ಪಿಳ್ಳೈ ಎಂಬ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

೮ ಮಂದಿ ಶಿವಸೇನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಬೆಳಗಾವಿ, ಜ. ೨೩: ಬೆಳಗಾವಿ ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಬೇಕೆಂದು ಪ್ರತಿಭಟನೆಗೆ ಯತ್ನಿಸಿ ಗಡಿಯಲ್ಲಿ ಪುಂಡಾಟ ನಡೆಸಿದ್ದ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರ ವಿರುದ್ಧ ಬೆಳಗಾವಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೆಳಗಾವಿ ಗಡಿ ವಿವಾದವನ್ನೆತ್ತಿ ಉದ್ಧಟತನ ಮೆರೆದಿದ್ದ ಶಿವಸೇನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೊಲ್ಲಾಪುರ ಜಿಲ್ಲೆ ಶಿವಸೇನೆ ಅಧ್ಯಕ್ಷ ವಿಜಯ್ ದೇವಣೆ ಸೇರಿದಂತೆ ಎಂಟು ಮಂದಿಯ ವಿರುದ್ಧ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬೆಳಗಾವಿ ಪಾಲಿಕೆ ಎದುರು ಹಾರಿಸಲಾಗಿರುವ ಕನ್ನಡ ಧ್ವಜ ಹಾಗೂ ಧ್ವಜಸ್ತಂಭವನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿ ಮಹಾರಾಷ್ಟ್ರ ಏಕಿಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಕಾರ್ಯಕರ್ತರು ಗುರುವಾರ ಬೆಳಗಾವಿ ನಗರ ಪಾಲಿಕೆ (ಬಿಸಿಸಿ) ಆವರಣದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ್ದರು.