ಶನಿವಾರಸಂತೆ, ಜ. ೨೧: ಸಮೀಪದ ಹುಲುಕೋಡು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ (ಶ್ರೀ ಹುಲುಕೋಡಯ್ಯ) ಪೂಜೆ ಹಾಗೂ ಜಾತ್ರಾ ಮಹೋತ್ಸವ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಜರುಗಿತು.

ಬೆಂಬಳೂರು ಬಾಣಂತಮ್ಮ ದೇವಿಯ ೨ನೇ ಮಗ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಸಂಕ್ರಾAತಿ ಹಬ್ಬ ಕಳೆದ ೩ನೇ ದಿನ ನಡೆಯುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾತ್ರೆಯನ್ನು ಸರಳವಾಗಿ ಆಚರಿಸಿದರು. ಗ್ರಾಮದ ದೇವಾಲಯದಿಂದ ಬೆಳಿಗ್ಗೆ ೯ ಗಂಟೆಗೆ ದೇವರ ಮೂರ್ತಿಯನ್ನು ಗಂಗಾಸ್ನಾನಕ್ಕೆ ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ತರಲಾಯಿತು. ೧೧ ಗಂಟೆಗೆ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಮಧ್ಯಾಹ್ನ ೧೨ ಗಂಟೆಗೆ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಕಲಶ ಹೊತ್ತ ಮಹಿಳೆಯರು, ಗ್ರಾಮಸ್ಥರು, ಭಕ್ತಾದಿಗಳು ಗ್ರಾಮದ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆಸಿದರು. ನಂತರ ಜಾತ್ರಾ ಮೈದಾನದ ಗುಡಿಯಲ್ಲಿರಿಸಿ ಸಂಜೆ ೫ ರವರೆಗೆ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಕೊರೊನಾ ಕಾರಣದಿಂದಾಗಿ ಜಾತ್ರೆಯಲ್ಲಿ ಹಂಡ್ಲಿ, ಶನಿವಾರಸಂತೆ, ಕೊಡ್ಲಿಪೇಟೆಯ ವಿರಳ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ವಿವಿಧ ಮಠಗಳ ಸ್ವಾಮೀಜಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.