ಕುಶಾಲನಗರ, ಜ. ೨೨: ಮೈಸೂರಿನ ಡಿಆರ್‌ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕೊಡಗು ಜಿಲ್ಲಾ ಪೊಲೀಸ್ ಸಂಯುಕ್ತ ಆಶ್ರಯದಲ್ಲಿ ೨ ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆದ ಶಿಬಿರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಚಾಲನೆ ನೀಡಿದರು.
ಪೊಲೀಸರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಡಿಆರ್‌ಎಂ ಆಸ್ಪತ್ರೆಯೊಂದಿಗೆ ಕೈಜೋಡಿಸಿ ಆಯೋಜಿಸಲಾಗಿದೆ. ಪೊಲೀಸರ ಆರೋಗ್ಯ ಚೆನ್ನಾಗಿದ್ದರೆ ಇಡೀ ಸಮಾಜದ ಆರೋಗ್ಯ ಸ್ಥಿರವಾಗಿರುತ್ತದೆ. ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರು ಇದರ ಪ್ರಯೋಜನ ಪಡೆಯುವಂತೆ ಕ್ಷಮಾ ಮಿಶ್ರ ತಿಳಿಸಿದರು. ಈ ಸಂದರ್ಭ ಶಿಬಿರದಲ್ಲಿ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಆರೋಗ್ಯ ತಪಾಸಣೆ ನಡೆಸಿದರು. ಪೊಲೀಸ್ ಮತ್ತು ಅವರ ಕುಟುಂಬದವರು ಸೇರಿ ಒಟ್ಟು ೨೫೦ ಜನರ ಆರೋಗ್ಯ ತಪಾಸಣೆ ಮಾಡುವ ಗುರಿಯೊಂದಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಡಿಆರ್‌ಎಂ ಆಸ್ಪತ್ರೆಯ ವ್ಯವಸ್ಥಾಪಕ ಲೋಕೇಶ್ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದರು.
ಶಿಬಿರದ ಪ್ರಮುಖರಾದ ಡಾ. ಪ್ರಶಾಂತ್, ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಮಹೇಶ್ ದೇವರು, ಠಾಣಾಧಿಕಾರಿಗಳಾದ ಅಚ್ಚಮ್ಮ, ವೆಂಕಟರಮಣ, ಡಿಆರ್‌ಎಂ ಆಸ್ಪತ್ರೆಯ ಡಾ. ರಾಮಕೃಷ್ಣ, ಡಾ. ತೇಜಿನ್ ನೋರ್ಡನ್, ಡಾ. ಜಯಲಕ್ಷ್ಮಿ, ಅಶ್ವಿಥ ಮತ್ತು ನವೀನ್ ಜೇಮ್ಸ್ ಇದ್ದರು.