ಶಿವಮೊಗ್ಗ ಹುಣಸೋಡು ಸ್ಫೋಟ:ಕಾರಣ ಇನ್ನೂ ನಿಗೂಢ
ಶಿವಮೊಗ್ಗ, ಜ. ೨೨: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ಸ್ಥಳದಲ್ಲಿ ಸಂಭವಿಸಿದ ಸ್ಫೋಟ ಅವಘಡದಲ್ಲಿ ೮ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸ್ಫೋಟದ ಸಂದರ್ಭದಲ್ಲಿ ಘಟನಾ ಪ್ರದೇಶದಲ್ಲಿ ಎಷ್ಟು ಮಂದಿ ಇದ್ದರು. ಸ್ಫೋಟಗೊಂಡ ಲಾರಿಯಲ್ಲಿ ಜಿಲೆಟಿನ್ ಕಡ್ಡಿಗಳು ಮಾತ್ರವಲ್ಲದೇ ಡೈನಾಮೈಟ್ಗಳೂ ಕೂಡ ಇದ್ದವು ಎಂಬ ಶಂಕೆ ಇದ್ದು, ಈ ಪೈಕಿ ಎಷ್ಟು ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ ಮತ್ತು ಇನ್ನೂ ಎಷ್ಟು ಜಿಲೆಟಿನ್ ಕಡ್ಡಿಗಳು ಮತ್ತು ಡೈನಾಮೈಟ್ಗಳು ಜೀವಂತವಾಗಿವೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕ ಎದುರಾಗಿದೆ. ಒಂದು ವೇಳೆ ಕೆಲವು ಸ್ಫೋಟಕಗಳು ಸಜೀವ ಸ್ಥಿತಿಯಲ್ಲಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಘಟನೆ ದೊಡ್ಡ ಅಚಾತುರ್ಯ. ಕಾರಣರಾದವರನ್ನು ಹುಡುಕಿ ಕಾನೂನಿನ ಮುಂದೆ ತರಲಾಗುವುದು ನಾಳೆ ತಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಪ್ರಸ್ತುತ ಕ್ವಾರಿ ಪ್ರದೇಶದ ಮೂಲ ಮಾಲೀಕ ಅವಿನಾಶ್, ಗುತ್ತಿಗೆದಾರ ಸುಧಾಕರ್, ಕಲ್ಲು ಗಣಿಗಾರಿಕೆಗೆ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ದುರಂತದಲ್ಲಿ ಬಿಹಾರ ಮೂಲದ ೮ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಮೃತರ ವಿವರ ಲಭ್ಯವಾಗಿಲ್ಲ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ ೮ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊAದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ. ಸ್ಫೋಟದ ತೀವ್ರತೆ ಹೇಗಿತ್ತು ಎಂದರೆ, ದುರಂತದಲ್ಲಿ ಮೃತಪಟ್ಟಿರೋ ಅದೆಷ್ಟೋ ಕಾರ್ಮಿಕರ ಮೃತದೇಹ ಗುರುತೇ ಸಿಗದಷ್ಟು ಛಿದ್ರ ಛಿದ್ರವಾಗಿದೆ. ಲಾರಿಯೊಂದಕ್ಕೆ ತುಂಬಿದ್ದ ಜೆಲಿಟಿನ್ ಸ್ಫೋಟಗೊಂಡು ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಲಾರಿಯಲ್ಲಿದ್ದ ಸುಮಾರು ೫೦ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳಲ್ಲಿ, ಬಹುತೇಕ ಜಿಲ್ಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಾರಿ ಛಿದ್ರ ಛಿದ್ರಗೊಂಡಿದೆ ಎಂದು ತಿಳಿದುಬಂದಿದೆ. ಇನ್ನು ದುರಂತಕ್ಕೆ ಕಾರ್ಮಿಕರ ಬೀಡಿ ಮತ್ತು ಸಿಗರೇಟ್ ಸೇವನೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಜಿಲೆಟಿನ್ ಕಡ್ಡಿಗಳು ಮತ್ತು ಇತರ ಸ್ಫೋಟಕಗಳು ತುಂಬಿದ್ದ ಲಾರಿ ಕ್ವಾರಿಯಲ್ಲಿದ್ದಾಗ, ಒಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀಡಿ ಮತ್ತು ಸಿಗರೇಟ್ ಸೇದುತ್ತಿದ್ದರು. ಇದೇ ಅವಘಡಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಮೃತರ ಕುಟುಂಬಕ್ಕೆ ತಲಾ ರೂ. ೫ ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ನಾಳೆ ಶಿವಮೊಗ್ಗಕ್ಕೆ ತೆರಳಿ ಘಟನಾ ಸ್ಥಳದಲ್ಲಿ ಖುದ್ದು ಪರಿಶೀಲನೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸಚಿವರ ಖಾತೆ ಬದಲಾವಣೆ ಮಾಡಿ ಸಿಎಂ ಬಿಎಸ್ವೈ ಆದೇಶ
ಬೆಂಗಳೂರು, ಜ. ೨೨: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ವೇಳೆ ಭುಗಿಲೆದ್ದಿದ್ದ ಅಸಮಾಧಾನ ಶಮನಗೊಳಿಸುವ ಸಂಬAಧ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವರ ಖಾತೆ ಹಂಚಿಕೆಯಲ್ಲಿ ಸಣ್ಣ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನೂತನ ಆದೇಶದಂತೆ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆಯ ಜವಾಬ್ದಾರಿ ನೀಡಲಾಗಿದ್ದು, ಸಚಿವ ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆಯನ್ನು ನೀಡಲಾಗಿದೆ. ಅಂತೆಯೇ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಜೊತೆ ಹಜ್ ಮತ್ತು ವಕ್ಫ್ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇನ್ನು ಸಚಿವ ಕೆ.ಸಿ. ನಾರಾಯಣ ಗೌಡ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ನೀಡಲಾಗಿದ್ದು, ಅರವಿಂದ ಲಿಂಬಾವಳಿ ಅವರಿಗೆ ಅರಣ್ಯ ಇಲಾಖೆಯ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಸಚಿವ ಆರ್. ಶಂಕರ್ ಅವರಿಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಜವಾಬ್ದಾರಿ ನೀಡಲಾಗಿದೆ.
ನಿವೃತ್ತ ಸಿಜೆಐ ರಂಜನ್ ಗೊಗೋಯ್ಗೆ ಝಡ್ ಪ್ಲಸ್ ಭದ್ರತೆ!
ನವದೆಹಲಿ, ಜ. ೨೨: ಐತಿಹಾಸಿಕ ರಾಮಮಂದಿರ ವಿವಾದದ ತೀರ್ಪು ನೀಡಿದ್ದ ನಿವೃತ್ತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ. ಆ ಮೂಲಕ ದೇಶದ ಯಾವುದೇ ಮೂಲೆಗೆ ರಂಜನ್ ಗೊಗೋಯ್ ಪ್ರಯಾಣಿಸಿದರೂ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಈಗಾಗಲೇ ಕೇಂದ್ರ ಗೃಹ ಇಲಾಖೆ ರಂಜನ್ ಗೊಗೋಯ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ಕುರಿತು ಸಿಆರ್ಪಿಎಫ್ ಸೂಚನೆ ನೀಡಿದೆ.
ಪ್ರಾದೇಶಿಕ ಅಸಮತೋಲನ ಒಪ್ಪಿಕೊಂಡ ವಿಜಯೇಂದ್ರ
ಕಲಬುರಗಿ, ಜ. ೨೨: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸರಿಯಾದ ಪ್ರಾತಿನಿಧ್ಯ ನೀಡಲು ಬಯಸಿದ್ದರೂ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಅದು ಸಾಧ್ಯವಾಗಿಲ್ಲ ಮತ್ತು ಅದು ಪಕ್ಷದ ಕರ್ತವ್ಯವಾಗಿತ್ತು. ಹೀಗಾಗಿ ಅವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನವಿದೆ ಎಂದು ಒಪ್ಪಿಕೊಂಡರು ಮತ್ತು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಪರಿಹರಿಸಲಿದ್ದಾರೆಂದರು.
ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು
ಬೆಂಗಳೂರು, ಜ. ೨೨: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿ ಗೋಹತ್ಯೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ. ಕೂಡಗಿ ಗ್ರಾಮದ ಬಳಿಯ ರೈಲ್ವೆ ಹಳಿ ಹತ್ತಿರದ ಖಾಸಗಿ ಶೆಡ್ವೊಂದರಲ್ಲಿ ವ್ಯಕ್ತಿಯೊಬ್ಬ ಎತ್ತೊಂದನ್ನು ಕತ್ತರಿಸಿ ಮಾಂಸ ಮಾರಾಟದಲ್ಲಿ ತೊಡಗಿದ್ದ ವೇಳೆ ಕೂಡಗಿ ಪಿಎಸ್ಐ ರೇಣುಕಾ ಜಕನೂರು ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸಮ್ಮೇಳನಾಧ್ಯಕ್ಷರಾಗಿ ಡಾ. ದೊಡ್ಡರಂಗೇಗೌಡ ಆಯ್ಕೆ
ಬೆಂಗಳೂರು, ಜ. ೨೨: ಹಾವೇರಿಯಲ್ಲಿ ಫೆ. ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಡಾ. ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಭೆ ನಡೆಸಿತು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಸಮ್ಮೇಳನಾಧ್ಯಕ್ಷರು ಯಾರು ಎಂಬದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಸದನ ಸಮಿತಿಯಿಂದ ೮೪ ಪುಟಗಳ ಮಧ್ಯಂತರ ವರದಿ ಸಲ್ಲಿಕೆ
ಬೆಂಗಳೂರು, ಜ. ೨೨: ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ೧೫-೧೨-೨೦೨೦ ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯ ಸದನ ಸಮಿತಿ ಇಂದು ೮೪ ಪುಟಗಳ ಮಧ್ಯಂತರ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಲ್ಲಿಸಿತು. ವಿಧಾನ ಸೌಧದ ಸಭಾಪತಿಗಳ ಕೊಠಡಿಯಲ್ಲಿ ವರದಿ ಸಲ್ಲಿಸಿ ಮಾತಾನಾಡಿದ ಮರಿತಿಬ್ಬೇಗೌಡ ಅವರು, ಸಮಿತಿಗೆ ೨೦ ದಿನಗಳ ಕಾಲಾವಕಾಶ ನೀಡಲಾಗಿತ್ತು, ಈವರೆಗೆ ಸಮಿತಿ ಒಟ್ಟು ಐದು ಸಭೆಗಳನ್ನು ನಡೆಸಿದ್ದು, ಸಮಯಾವಕಾಶ ಬೇಕಾಗಿದೆ. ಆದ್ದರಿಂದ, ಸಮಿತಿಯ ಮೊದಲ ನಾಲ್ಕು ಸಭೆಗಳ ಮಾಹಿತಿಯನ್ನೊಳಗೊಂಡ ವರದಿ ಹಾಗೂ ಸಾಕ್ಷ್ಯದಾರಗಳನ್ನು ಸಿ.ಡಿ. ರೂಪದಲ್ಲಿ ಮಧ್ಯಂತರ ವರದಿಯಲ್ಲಿ ಸಲ್ಲಿಸಲಾಗಿದೆ, ಸಂಪೂರ್ಣ ವರದಿ ಸಲ್ಲಿಸಲು ಇನ್ನೂ ಹೆಚ್ಚಿನ ಸಮಯವಾಕಾಶ ಕೇಳಲಾಗುವುದು ಎಂದು ತಿಳಿಸಿದರು. ಉಪ ಸಭಾಪತಿ ಧರ್ಮೆಗೌಡ ಅವರ ಸಾವಿನ ಕುರಿತು ಅವರು ಬರೆದಿಟ್ಟಿರುವರು ಎನ್ನಲಾಗಿರುವ ಪತ್ರವನ್ನು ಒದಗಿಸಲು ಕೋರಿ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿದೆ. ಆದ್ದರಿಂದ, ೨೦ ದಿನಗಳ ಒಳಗಾಗಿ ಪೂರ್ಣ ವರದಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.