ಸೋಮವಾರಪೇಟೆ, ಜ. ೨೧: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚನ್ನಾಪುರದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಇದರೊಂದಿಗೆ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ರುದ್ರಭೂಮಿಗೆ ಜಾಗ ಒದಗಿಸಬೇಕೆಂದು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ನಿನ್ನೆ ದಿನ ಕೊಡ್ಲಿಪೇಟೆಯ ಚನ್ನಾಪುರದಲ್ಲಿ ಮಣಿ ಎಂಬವರು ಮೃತಪಟ್ಟಿದ್ದು, ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಜಾಗದ ಕೊರತೆ ಇದ್ದುದರಿಂದ ಸ್ಥಳಕ್ಕೆ ಭೇಟಿ ನೀಡಿದ ಕರವೇ ಕಾರ್ಯಕರ್ತರು, ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಕಂದಾಯ ಇಲಾಖೆಯಿಂದಲೇ ಜಾಗ ಗುರುತು ಮಾಡಬೇಕೆಂದು ಒತ್ತಾಯಿಸಿದರು.
ಚನ್ನಾಪುರ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವದರಿAದ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಇಲ್ಲವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ದೂರಿದರು.
ನಿನ್ನೆ ದಿನ ಮೃತರಾದ ಮಣಿ ಅವರ ಮೃತದೇಹವನ್ನು ಸರ್ಕಾರಿ ಜಾಗದಲ್ಲಿ ಅಂತ್ಯಸAಸ್ಕಾರ ಮಾಡಲು ಮುಂದಾಗುತ್ತಿದ್ದAತೆ ಒತ್ತುವರಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಗುರುತಿಸಿದ ಜಾಗದಲ್ಲಿ, ಅವರುಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಮಸ್ಯೆ ತಾಲೂಕಿನ ಹಲವು ಗ್ರಾಮಗಳಲ್ಲಿದ್ದು, ಕಂದಾಯ ಇಲಾಖೆ ಮೂಲಕ ಎಲ್ಲಾ ಗ್ರಾಮಗಳಲ್ಲೂ ಸ್ಮಶಾನಕ್ಕೆ ಜಾಗ ಮೀಸಲಿಡಬೇಕೆಂದು ಫ್ರಾನ್ಸಿಸ್ ಡಿಸೋಜ ಆಗ್ರಹಿಸಿದ್ದಾರೆ.
ಈ ಸಂದರ್ಭ ಶನಿವಾರಸಂತೆ ಹೋಬಳಿ ಕರವೇ ಅಧ್ಯಕ್ಷ ಆನಂದ್, ಚನ್ನಾಪುರ ಘಟಕ ಅಧ್ಯಕ್ಷ ಉದಯ್, ಉಪಾಧ್ಯಕ್ಷ ಲೂಯಿಸ್, ಸ್ಥಳೀಯರಾದ ಪ್ರವೀಣ್, ಸುರೇಶ್, ಚಂದ್ರು, ಶಾಫಿ, ಶಿವಪ್ಪ, ಸ್ವಾಮಿ, ತೀರ್ಥ, ಕೃಷ್ಣ, ಧರ್ಮ, ಅಖಿಲ್, ಅಬ್ಬಾಸ್, ಯೋಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.