ಮಡಿಕೇರಿ, ಜ. ೨೧: ಪೈಸಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನೆಲೆಸಿರುವ ವಿದ್ಯುತ್ ವಂಚಿತ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಷರತ್ತುಬದ್ಧವಾಗಿ ಕ್ರಮವಹಿಸಲು ತಾಲೂಕು ಪಂಚಾಯ್ತಿ ಮಾಸಿಕ ಕೆ.ಡಿ.ಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಗರದ ಸಾಮಾರ್ಥ್ಯಸೌಧ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಕೆ.ಲಕ್ಷಿö್ಮ ಈ ಬಗ್ಗೆ ಪ್ರಸ್ತಾಪಿಸಿ, ವಿದ್ಯುತ್ ವಂಚಿತ ಕುಟುಂಬಗಳಿಗೆ ಚೆಸ್ಕಾಂ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಬೇಕಾಗಿದೆ. ಇಂದಿಗೂ ಹಲವು ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿರುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಕೆಲ ಷರತ್ತುವಿಧಿಸಿ ನಡಾವಳಿಯಲ್ಲಿ ದಾಖಲಿಸಲಾಗುವುದು ಎಂದರು. ಚೆಸ್ಕಾಂ ಅಧಿಕಾರಿ ನಂದೀಶ್ ಮಾತನಾಡಿ, ವಿದ್ಯುತ್ ಸಂಪರ್ಕ ಒದಗಿಸಲು ಜಾಗದ ಮಾಲೀಕತ್ವ ಅಥವಾ ಗ್ರಾ.ಪಂ ನಿರಪೇಕ್ಷಣಾ ಪತ್ರ ಇರಬೇಕು. ಇವೆೆರಡು ಸಲ್ಲಿಸದಿದ್ದಲ್ಲಿ ವಿದ್ಯುತ್ ನೀಡಲಾಗುವುದಿಲ್ಲ. ತಾ.ಪಂ ನಿರ್ಣಯ ಆಧಾರದಲ್ಲಿ ವಿದ್ಯುತ್ ಒದಗಿಸಲು ಅವಕಾಶ ಇದೆ ಎಂದರು. ಅನುದಾನ ಸದ್ಭಳಕೆಗೆ ಸೂಚನೆ :ಆರ್ಥಿಕ ವರ್ಷ ಅಂತ್ಯವಾಗುವ ಮುನ್ನ ಆಯಾ ಇಲಾಖೆಗೆ ಮಂಜೂರಾಗಿರುವ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿ ಸುವಂತೆ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧಿಕಾರಿಗಳಿಗೆ ಸೂಚಿಸಿದರು. ೧೫ನೇ ಹಣಕಾಸು, ನರೇಗಾ ಸೇರಿದಂತೆ ಇನ್ನಿತರ ಮೂಲಗಳಿಂದ ಬಂದಿರುವ ಸರ್ಕಾರದ ಹಣ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಬಾರದು. ತಾಲೂಕಿನಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸಬೇಕು. ಶಾಸಕ ಕೆ.ಜಿ ಬೋಪಯ್ಯ ಅವರು ಕೂಡ ತಾಲೂಕಿನ ಅಭಿವೃದ್ಧಿ ದೃಷ್ಠಿಯಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಗೊಳಿಸಿದ್ದಾರೆ. ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು.
ಜಿ.ಪಂ ಇಂಜಿನಿಯರ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಮಾತನಾಡಿ, ಶಾಸಕ ಕೆ.ಜಿ ಬೋಪಯ್ಯ ಅವರ ಮೂಲಕ ಬಿಡುಗಡೆ ಯಾಗಬೇಕಾದ ರೂ. ೨೨ ಕೋಟಿ ಅನುದಾನದಲ್ಲಿ,
(ಮೊದಲ ಪುಟದಿಂದ) ರೂ. ೧೦.೬ ಕೋಟಿ ಮಂಜೂರಾಗಿದೆ. ಪೂರ್ಣಗೊಳ್ಳದ ೪೫೭ ಕಾಮಗಾರಿಗೆ ಶೇ. ೨೫ ರಂತೆ ಅನುದಾನ ಹಂಚಿಕೆ ಮಾಡಲಾಗುತ್ತದೆ. ಟೆಂಡರ್ ನೀಡಿಯು, ಕೆಲಸ ಆರಂಭಿಸದ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಲು ನೋಟೀಸ್ ಜಾರಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಾಲೆಗಳ ದುರಸ್ಥಿಗೆ ಪತ್ರ :
ದುಸ್ಥಿತಿಯಲ್ಲಿರುವ ತಾಲೂಕಿನ ಹಲವು ಶಾಲೆಗಳ ದುರಸ್ಥಿ ಕಾರ್ಯಕ್ಕೆ ಸಂಬAಧಿಸಿದAತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ ತಿಳಿಸಿದರು.
ಕೊಪ್ಪದಬಾಣೆ, ಚೇರಂಬಾಣೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶಾಲೆಗಳು ದುಸ್ಥಿತಿಯಲ್ಲಿದೆ. ಬೇಂಗೂರು, ಕೊಳಗದಾಳು ಶಾಲಾ ಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನ ವನ್ನು ಬೇರೆ ಶಾಲೆಗೆ ನೀಡಿದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಅನುದಾನ ಬದಲಾವಣೆ ಸರ್ಕಾರ ಮಟ್ಟದಲ್ಲಿ ಮಾಡಲಾಗುತ್ತದೆ. ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ. ತಂತ್ರಜ್ಞಾನದ
ಮೂಲಕ ಉನ್ನತ ಅಧಿಕಾರಿಗಳು ಗಮನಿಸಿ ಶಾಲೆಗಳ ಗ್ರೇಡಿಂಗ್ ಆಧಾರದಲ್ಲಿ ಬದಲಾವಣೆ ಮಾಡಿದ್ದಾರೆ. ತಾಲೂಕಿನಲ್ಲಿ ಸಿ ಮತ್ತು ಡಿ ಗ್ರೇಡ್‌ನಲ್ಲಿದ್ದ ೧೧ ಶಾಲೆ ಪೈಕಿ ೮ ಶಾಲೆ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ಒದಗಿಸಿದರು.
ತಾ.ಪಂ ಇಓ ಲಕ್ಷಿö್ಮÃ, ಶಾಲಾಭಿವೃದ್ಧಿಗೆ ಸರ್ಕಾರದ ಬಳಿ ಅನುದಾನ ಕೊರತೆ ಇದೆ. ಜಿಲ್ಲೆಯಲ್ಲಿ ೧೦೦ಕ್ಕೂ ಹೆಚ್ಚು ಶಾಲೆ ಹಾನಿಯಾಗಿದೆ ಎಂದರು.
ಮಹಿಳಾ ಕಾಯಕ ಶಕ್ತಿ ಆಂದೋಲನ :
ಮಹಿಳೆಯರು ಸ್ವಾವಲಂಬಿ ಆಗಲು ಸರ್ಕಾರ ರೂಪಿಸಿರುವ ಮಹಿಳಾ ಕಾಯಕ ಶಕ್ತಿ ಆಂದೋಲನ ಅನುಷ್ಠಾನಕ್ಕೆ ೪ ಗ್ರಾ.ಪಂ ವ್ಯಾಪ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಇಓ ಲಕ್ಷಿö್ಮÃ ತಿಳಿಸಿದರು.
ಪೆರಾಜೆ, ಮದೆ, ಗಾಳಿಬೀಡು, ಬೇಂಗೂರು ಗ್ರಾಮ ಆಯ್ದುಕೊಂಡಿದ್ದು, ಮಹಿಳೆಯರಿಗೆ ವೈಯಕ್ತಿಕ ಸೌಲಭ್ಯ ನೀಡುವ ನಿಟ್ಟಿನಲ್ಲಿ ಯೋಜನೆ ಸಹಕಾರಿಯಾಗಲಿದೆ. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ೧೦೦ ದಿನ ಕೆಲಸಕ್ಕೆ ಮಹಿಳೆಯರನ್ನು ಸೇರಿಸಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಸಮೀಕ್ಷೆ ನಡೆಯಲಿದೆ, ನಂತರ ಕಾಮಗಾರಿ ಅನುಷ್ಠಾನ ಮಾಡಿ ಕೆಲಸ ನೀಡಿ, ೧ ವಾರದಲ್ಲಿ ನಿಗದಿತ ವೇತನ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜ.೨೪ ಮಹಿಳಾ ದಿನದ ಅಂಗವಾಗಿ ಗ್ರಾ.ಪಂ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಮಹಿಳಾ ಸಂಘಗಳಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಕುಂದಚೇರಿಯ ಕೋಪಟ್ಟಿ ಹಾಗೂ ಚೇರಂಗಾಲ ವ್ಯಾಪ್ತಿಯ ಕೆಲ ಮನೆಗಳಿಗೆ ಮೂಲಭೂತ ವ್ಯವಸ್ಥೆ ಇಲ್ಲದ ಹಿನ್ನೆಲೆ ಅಲ್ಲಿಗೆ ಸೌಕರ್ಯ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಅಧ್ಯಕ್ಷೆ ಶೋಭಾ ಮೋಹನ್ ಸೂಚಿಸಿದರು. ವಾಟೇಕಾಡುವಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗವನ್ನು ಕಂದಾಯ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆ ಹೆಸರಿಗೆ ಬದಲು ಮಾಡಿದರೆ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಸುಂದರಿ ತಿಳಿಸಿದರು.
ಅಂಗನವಾಡಿಗೆ ತ್ವರಿತ ವಿದ್ಯುತ್ ಸಂಪರ್ಕ ಒದಗಿಸುವಂತೆ, ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡಲು ಆಯುಷ್ ಇಲಾಖೆಗೆ ಪ್ರಭಾರ ಅಧಿಕಾರಿಯ ನೇಮಕ, ಕೃಷಿ ಇಲಾಖೆ ಮೂಲಕ ನೀಡಿರುವ ಟಾರ್ಪಲ್ ಸಂಖ್ಯೆ ಹೆಚ್ಚಿಸುವಂತೆ, ಕುಂದಚೇರಿ ಗ್ರಾಮದಲ್ಲಿ ತೆಗೆದಿರುವ ತೆರೆದ ಬಾವಿಯನ್ನು ಮುಚ್ಚದೆ ನಿರ್ಲಕ್ಷö್ಯ ವಹಿಸಿದ್ದು ಕ್ರಮಕೈಗೊಳ್ಳುವಂತೆ ತಾ.ಪಂ ಅಧ್ಯಕ್ಷೆ ಶೋಭಾ ಮೋಹನ್ ಹಾಗೂ ಇಓ ಲಕ್ಷಿö್ಮÃ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಂತು ಸುಬ್ರಮಣಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.