ಮಡಿಕೇರಿ, ಜ. ೨೧: ಅರಣ್ಯ ಇಲಾಖೆಯ ಜೀಪಿನೊಳಗೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮರಳಿ ಅರಣ್ಯಕ್ಕೆ ಬಿಡಲಾಗಿದೆ. ನಿನ್ನೆ ದಿನ ಕೊಯನಾಡುವಿನ ಅರಣ್ಯ ಸಸ್ಯಕ್ಷೇತ್ರದ ಬಳಿ ನಿಲ್ಲಿಸಲಾಗಿದ್ದ ಅರಣ್ಯ ಇಲಾಖೆಯ ಜೀಪಿನ ಡೀಸೆಲ್ ಟ್ಯಾಂಕ್ ಬಳಿ ಹಾವಿನ ಬಾಲ ಗೋಚರಿಸಿದೆ. ಈ ಬಗ್ಗೆ ಇಲಾಖಾ ಸಿಬ್ಬಂದಿಗಳು ಹಾಕತ್ತೂರಿನ ಗ್ರಾ.ಪಂ. ಮಾಜಿ ಸದಸ್ಯ ಪಿಯೂಷ್ ಪೆರೇರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೆರೇರ ಜೀಪಿನ ಡೀಸೆಲ್ ಟ್ಯಾಂಕ್ ಮೇಲೆ ಮಲಗಿದ್ದ ಸುಮಾರು ೧೫ ಅಡಿ ಉದ್ದದ ಕಾಳಿಂಗನನ್ನು ಹಿಡಿದು ಸಂಪಾಜೆ ಅರಣ್ಯಕ್ಕೆ ಬಿಟ್ಟರು.
ಮತ್ತೊಂದು ಪ್ರಕರಣದಲ್ಲಿ ಮಡಿಕೇರಿ ಸನಿಹದ ಬಿಳಿಗೇರಿ ಗ್ರಾಮದ ನಿವಾಸಿ ದೇವಜನ ಗಿರಿ ಎಂಬವರ ಮನೆಯೊಳಗಡೆ ಸೇರಿಕೊಂಡಿದ್ದ ೫ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ. ನಿನ್ನೆ ಹಗಲು ವೇಳೆ ಮನೆಯೊಳಗಿದ್ದ ನಾಗರನನ್ನು ಸೆರೆ ಹಿಡಿದ ಪೆರೇರ ಅರಣ್ಯಕ್ಕೆ ಬಿಟ್ಟಿದ್ದಾರೆ. ಮನೆ, ಸುತ್ತಮುತ್ತ ಹಾವುಗಳು ಕಂಡುAದರೆ ಅವುಗಳನ್ನ ಕೊಲ್ಲದೆ ತಮಗೆ ಕರೆ ಮಾಡುವಂತೆ ಪೆರೇರ ಕೋರಿದ್ದಾರೆ.