ಕುಶಾಲನಗರ, ಜ. ೨೨: ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮಾಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಆಶ್ರಯದಲ್ಲಿ ಭಗೀರಥ ಸಂಸ್ಥೆ ಮೂಲಕ ಸಮೀಪದ ಕೊಪ್ಪ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಂಗವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಬೀದಿ ನಾಟಕ ಆಯೋಜಿಸಲಾಗಿತ್ತು. ಅಲ್ಲಿನ ಬಸ್ ನಿಲ್ದಾಣ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಶ್ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಸತೀಶ್, ಪ್ರತಿ ವ್ಯಕ್ತಿಗೂ ದಿನವೊಂದಕ್ಕೆ ೫೫ ಲೀಟರ್ ಹಾಗೂ ಜಾನುವಾರು ಗಳಿಗೆ ೩೫ ಲೀಟರ್ ನೀರು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಭಗೀರಥ ಸಂಸ್ಥೆಯ ಪ್ರಮುಖರಾದ ಮಹೇಶ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಮನೆಮನೆಗೆ ಗಂಗೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಅನುಷ್ಠಾನಗೊಳ್ಳುತ್ತಿದೆ. ೨೦೨೩ ರ ವೇಳೆಗೆ ಪ್ರತಿ ಮನೆಗೂ ಸರಕಾರದ ಮೂಲಕ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರ ಸದುಪ ಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು.

ಸಂಸ್ಥೆಯ ಚೇತನ್ ಮಾತನಾಡಿ, ಅಮೂಲ್ಯವಾಗಿರುವ ನೀರನ್ನು ಪೋಲಾಗದಂತೆ ಎಚ್ಚರವಹಿಸಲು ನೀರಿನ ಮೀಟರ್ ಅಳವಡಿಸ ಲಾಗುವುದು. ಯೋಜನೆಗೆ ತಗಲುವ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಶೇ. ೭೫, ೧೫ನೇ ಹಣಕಾಸು ಮೂಲಕ ಶೇ. ೧೫ ಉಳಿದ ಶೇ ೧೦ ಅನ್ನು ಸಮುದಾಯ ವಂತಿಕೆಯಾಗಿ ಬಳಸಬೇಕೆಂದು ಮನವಿ ಮಾಡಿದರು.

ಗ್ರಾ.ಪಂ. ಸದಸ್ಯರಾದ ರಾಮಚಂದ್ರ, ಸಿಂಧು, ಸುರೇಶ್ ಅವರುಗಳು ತಮಟೆ ಬಡಿಯುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಅರಿವು ಸಾಂಸ್ಕೃತಿಕ ತಂಡ ಮೂಲಕ ನಡೆದ ಬೀದಿ ನಾಟಕ ಗ್ರಾಮದ ವಿವಿಧೆಡೆ ನಡೆಯಿತು. ಅಂಗನವಾಡಿ, ಆಶಾ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.