ಗೋಣಿಕೊಪ್ಪ ವರದಿ, ಜ. ೨೨: ಕಾವೇರಿ ಮಹಿಳಾ ಸಮಾಜ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಕ್ತಿ ದಿನಪತ್ರಿಕೆಯ ಹೆಚ್.ಕೆ. ಜಗದೀಶ್, ವಿಜಯವಾಣಿ ಪತ್ರಕರ್ತ ಸಣ್ಣುವಂಡ ಕಿಶೋರ್ ನಾಚಪ್ಪ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಾ.ಪಂ. ಉಪಾಧ್ಯಕ್ಷೆ ನೆಲ್ಲೀರ ಚಲನ್‌ಕುಮಾರ್ ಮಾತನಾಡಿ, ಒತ್ತಡ ಹಾಗೂ ಕೊರೊನಾ ಮಹಾಮಾರಿ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಕಾರ್ಯ ಶ್ಲಾಘನೀಯ ಎಂದರು. ಗೋಣಿಕೊಪ್ಪ ಆರ್‌ಎಂಸಿ ಸದಸ್ಯ ಗುಮ್ಮಟ್ಟೀರ ಕಿಲನ್ ಗಣಪತಿ ಮಾತನಾಡಿ, ಪತ್ರಕರ್ತರಿಂದ ಸಮಾಜಕ್ಕೆ ಸಾಕಷ್ಟು ಪ್ರಯೋಜನವಾಗುತ್ತಿವೆ. ಈ ನಿಟ್ಟಿನಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಸಹಕಾರ ನೀಡುವುದಾಗಿ ಘೋಷಿಸಿದರು.

ಜಿಲ್ಲಾಧ್ಯಕ್ಷೆ ಸವಿತಾರೈ ಮಾತನಾಡಿ, ಪ್ರಶಸ್ತಿ ಮೂಲಕ ಮಾಧ್ಯಮ ಪ್ರತಿನಿಧಿಗಳನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ವಿಶ್ಯುವಲ್ ಮಾಧ್ಯಮದ ಉತ್ತಮ ವರದಿಗೆ ದತ್ತಿ ನಿಧಿ ಸ್ಥಾಪಿಸುವುದಾಗಿ ಘೋಷಿಸಿದರು. ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ, ರಾಷ್ಟಿçÃಯ ಸಮಿತಿ ಸದಸ್ಯ ಮುರುಳಿದರ್, ವೀಕ್ಷಕ ಕೆ.ಎ. ಆದಿತ್ಯ ಇದ್ದರು. ಮಹಾಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಸಂಘದ ವರದಿ ವಾಚಿಸಿದರು. ಖಜಾಂಚಿ ವಿ.ವಿ. ಅರುಣ್‌ಕುಮಾರ್ ಲೆಕ್ಕ ಮಂಡಿಸಿದರು. ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಸಣ್ಣುವಂಡ ಕಿಶೋರ್ ನಾಚಪ್ಪ ಉಪಸ್ಥಿತರಿದ್ದರು.