ನಾಪೋಕ್ಲು, ಜ. ೨೧: ಸಂಕಷ್ಟದಲ್ಲಿರುವ ಕೊಡಗಿನ ಕಾಫಿ ಬೆಳೆಗಾರರಿಗೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಈ ಬಾರಿಯಾದರೂ ಸೂಕ್ತ ಸಹಾಯ ಹಸ್ತ ಚಾಚಬೇಕೆಂದು, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಪ್ಪ, ಕಳೆದ ೨೦೧೫ರಿಂದಲೇ ಕಾಫಿ ಬೆಳೆಗಾರರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರು. ಸತತ ಮೂರು ವರ್ಷ ಅನಾವೃಷ್ಟಿ, ಬಳಿಕ ಮೂರು ವರ್ಷಗಳ ಕಾಲ ಅತಿವೃಷ್ಟಿ ಮತ್ತು ಜಲ ಪ್ರಳಯದ ಕಾರಣದಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ ಕೊಡಗಿನ ವಾಣಿಜ್ಯ ಬೆಳೆಗಳಿಗೆ ಕೇರಳ ಮಾದರಿಯಲ್ಲಿ ಪ್ಯಾಕೇಜ್ ಘೋಷಿಸಬೇಕೆಂದು ಕಾವೇರಪ್ಪ ಮನವಿ ಮಾಡಿದರು. ಕಾಫಿ, ಕರಿಮೆಣಸಿಗೆ ಬೆಂಬಲ ಬೆಲೆ ಘೋಷಣೆ ಹಾಗೂ ಸಣ್ಣ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಕೊಡಗಿನ ವಾಣಿಜ್ಯ ಬೆಳೆಗಳಿಂದ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬರುತ್ತಿರುವುದರಿಂದ, ಈ ಬೆಳೆಗಳ ಅಭಿವೃದ್ಧಿಗಾಗಿ ಮಂಡಳಿಯೊAದನ್ನು ಅಸ್ತಿತ್ವಕ್ಕೆ ತರಬೇಕು. ರಾಜ್ಯದಲ್ಲಿ ಎಲ್ಲ ರೈತರಿಗೂ ೧೦ ಹೆಚ್‌ಪಿ ಸಾಮರ್ಥ್ಯದ ಮೋಟಾರ್ ಪಂಪ್‌ಗಳಿಗೆ ವಿದ್ಯುತ್ ರಿಯಾಯಿತಿಯಿದ್ದರೂ, ಕೊಡಗಿನಲ್ಲಿ ಸಾಕಷ್ಟು ಸಮಯಗಳಿಂದ ಈ ಯೋಜನೆ ಜಾರಿಯಾಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ತಾಕೀತು ಮಾಡಿದರು. ಜೊತೆಗೆ, ಜಿಲ್ಲೆಯಲ್ಲಿ ಅತ್ಯಗತ್ಯ ಮೂಲ ಭೂತಸೌಲಬ್ಯಗಳಾದ ವಿದ್ಯುತ್, ಗ್ರಾಮೀಣ ರಸ್ತೆಗಳ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ ಸಮಸ್ಯೆಯಿಂದ ಪಾರಾಗುವಂತಾಗಲು ಸರ್ಕಾರವು ಪ್ರತಿ ವರ್ಷ, ಮಳೆ ಪರಿಹಾರ ನಿಧಿಯಾಗಿ ರೂ. ೧೦೦ ಕೋಟಿ ಅನುದಾನ ಘೋಷಿಸಬೇಕೆಂದು ಕಾವೇರಪ್ಪ ಮನವಿ ಮಾಡಿದ್ದಾರೆ.