ಕುಶಾಲನಗರ, ಜ. ೨೨: ಕುಶಾಲನಗರ ರೋಟರಿ ಸಂಸ್ಥೆ ಹಾಗೂ ವಿವೇಕಾನಂದ ಯೂತ್ ಡೆವಲಪ್‌ಮೆಂಟ್ ಸಂಸ್ಥೆಯ ವತಿಯಿಂದ ವಿಶೇಷಚೇತನ ಮಕ್ಕಳಿಗೆ ಉಚಿತ ಆರೋಗ್ಯವೃದ್ಧಿ ಶಿಬಿರ ಕುಶಾಲನಗರದಲ್ಲಿ ನಡೆಯುತ್ತಿದೆ.

ಕುಶಾಲನಗರದ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಮೂರು ದಿನಗಳ ಶಿಬಿರದಲ್ಲಿ ಮಕ್ಕಳಿಗೆ ಆಯುರ್ವೇದ ಮಸಾಜ್, ತಜ್ಞ ವೈದ್ಯರಿಂದ ಚಿಕಿತ್ಸೆ, ಫಿಸಿಯೋಥೆರಪಿ ಹಾಗೂ ಎಣ್ಣೆ ಸ್ನಾನದ ಮೂಲಕ ಚೈತನ್ಯ ನೀಡಲಾಗುತ್ತಿದೆ. ಇದರೊಂದಿಗೆ ಪಾಲ್ಗೊಂಡು ಮಕ್ಕಳಿಗೆ, ಪೋಷಕರಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ವಿವೇಕಾನಂದ ಯೂತ್ ಡೆವೆಲೆಪ್‌ಮೆಂಟ್ ಸಂಸ್ಥೆಯ ಪ್ರತಿನಿಧಿಗಳು ಕೊಡಗಿನಾದ್ಯಂತ ಸರ್ವೆ ಮಾಡಿ ೨೨ ವಿಶೇಷಚೇತನ ಮಕ್ಕಳನ್ನು ಶಿಬಿರಕ್ಕೆ ಕರೆ ತಂದಿದ್ದು ಮಕ್ಕಳ ಪೋಷಕರಿಗೆ ಕೌನ್ಸಿಲಿಂಗ್ ಸಹ ಮಾಡಲಾಗುತ್ತಿದೆ. ಶಿಬಿರದಲ್ಲಿರುವ ಮಕ್ಕಳಿಗೆ ಸುಮಾರು ೧೫ ವೀಲ್ ಚೇರ್‌ಗಳು ಹಾಗೂ ಕೃತಕ ಕಾಲುಗಳ ಅವಶ್ಯಕತೆ ಇದ್ದು ದಾನಿಗಳು ನೆರವು ನೀಡುವಂತೆ ರೋಟರಿ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್ ಪ್ರಕಟಣೆ ಮೂಲಕ ಕೋರಿದ್ದಾರೆ.