ಮಡಿಕೇರಿ, ಜ. ೨೨: ದಶಕಗಳಿಂದ ಅರಣ್ಯವನ್ನು ಸಂರಕ್ಷಿಸುತ್ತಾ ಬಂದಿರುವ ಅರಣ್ಯವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರ ಕಟಿಬದ್ಧವಾಗಿದೆ ಎಂದು ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಅರಣ್ಯದಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸರಕಾರ ಹಲವಾರು ಯೊಜನೆಗಳನ್ನು ಜಾರಿಗೆ ತಂದಿದೆ. ಅರಣ್ಯವನ್ನು ರಕ್ಷಿಸುವಲ್ಲಿ ಅರಣ್ಯವಾಸಿಗಳ ಕೊಡುಗೆ ಸಾಕಷ್ಟಿದ್ದು, ಮರಗಳ್ಳರಿಂದಲೇ ಅರಣ್ಯ ನಾಶವಾಗುತ್ತಿದೆಯೇ ಹೊರತು ಅರಣ್ಯವಾಸಿಗಳಿಂದಲ್ಲ, ಸರಕಾರ ಅರಣ್ಯವಾಸಿಗಳಿಗೆ ಪಡಿತರ, ಪೌಷ್ಟಿಕ ಆಹಾರ, ವಸತಿ, ಶಿಕ್ಷಣ, ಅನಿಲ, ವಿದ್ಯುತ್, ಸೋಲಾರ್ ದೀಪಗಳು ಸೇರಿದಂತೆ ಅತ್ಯಗತ್ಯ ಮೂಲಭೂತ ಸೌಲಭ್ಯಗಳನ್ನು ವಿವಿಧ ಇಲಾಖೆಗಳ ಮೂಲಕ ಒದಗಿಸಲಾಗುತ್ತಿದೆ. ಆದರೆ, ಪರಿಸರವಾದಿಗಳೆಂದು ಹೇಳಿಕೊಳ್ಳುವವರು ಅರಣ್ಯವಾಸಿಗಳಿಗೆ ಕಿರುಕುಳ ನೀಡುತ್ತಿರುವದು ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಉಸ್ತುವಾರಿ ಸಚಿವರುಗಳ ಗಮನಕ್ಕೆ ತರಲಾಗಿದೆ, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯವಾಸಿಗಳಿಗೆ ಕಿರುಕುಳ ನೀಡುತ್ತಿರುವ ಪರಿಸರವಾದಿಗಳು ತಾವು ಅತಿಕ್ರಮಿಸಿಕೊಂಡಿರುವ ಪೈಸಾರಿ ಜಾಗ ಹಾಗೂ ತಮ್ಮ ಬಳಿ ಕೃಷಿ ಮಾಡದೆ ಪಾಳು ಬಿಟ್ಟಿರುವ ಜಮೀನನ್ನು ಅರಣ್ಯವಾಸಿಗಳಿಗೆ ನೀಡುವ ಮೂಲಕ ನೈಜ ಕಾಳಜಿ ತೋರಲಿ, ಆ ಮೂಲಕ ಬಡಜನರಿಗೆ ಸಹಾಯ ಮಾಡಲಿ ಎಂದು ಸಲಹೆ ಮಾಡಿದ್ದಾರೆ.