ಸಿದ್ದಾಪುರ, ಜ. ೨೦: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ೨೦೧೯-೨೦ನೇ ಸಾಲಿನ ಉದ್ಯೋಗ ಖಾತ್ರಿ ಹಾಗೂ ೧೪ನೇ ಹಣಕಾಸು ಯೋಜನೆಯ ಲೆಕ್ಕಪರಿಶೋಧನಾ ಸಭೆ ಸ್ಥಳೀಯ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಬಡ ಕುಟುಂಬಗಳು ಪಂಚಾಯಿತಿಯಿAದ ಅನುದಾನ ಬರುವ ನಿರೀಕ್ಷೆಯಲ್ಲಿ ಇಂಗು ಗುಂಡಿಗಳನ್ನು ತೆಗೆಸಿದ್ದಾರೆ. ಆದರೆ ೨-೩ ವರ್ಷ ಕಳೆದರೂ ಕೂಡ ಈವರೆಗೂ ಫಲಾನುಭವಿಗಳಿಗೆ ಹಣ ಮಂಜೂರಾತಿ ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ ಪಿ.ಡಿ.ಒ ಬಳಿ ಪ್ರಶ್ನಿಸಿದರು.

ಈ ಹಿಂದೆ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಪಿ.ಡಿ.ಓ. ಅವರ ಅವಧಿಯಿಂದಲೇ ಇಂಗು ಗುಂಡಿಯನ್ನು ತೆರೆದ ಫಲಾನುಭವಿಗಳಿಗೆ ಹಣ ನೀಡದೇ ಸತಾಯಿಸುತ್ತಿರುವ ಬಗ್ಗೆ ಸುನಿತಾ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಇಂಗು ಗುಂಡಿ ನಿರ್ಮಾಣ ಮಾಡಿರುವ ಫಲಾನುಭವಿಗಳನ್ನು ಗುರುತಿಸಿ ಹಣ ಮಂಜೂರಾತಿ ಮಾಡಿಕೊಡುವಂತೆ ಪಿ.ಡಿ.ಓ. ಅನಿಲ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿ ಹೇಮಂತ್ ಕುಮಾರ್ ವಹಿಸಿದ್ದರು. ಲೆಕ್ಕ ಪರಿಶೋಧಕರಾಗಿ ದಿನೇಶ್ ಆಗಮಿಸಿದ್ದರು. ಇದೇ ಸಂದರ್ಭ ವಿವಿಧ ಕಾಮಗಾರಿಗಳ ಯೋಜನೆಗಳ ಬಗ್ಗೆ ಗ್ರಾಮಸ್ಥರಾದ ನೆಲ್ಲಿಕ್ಕಲ್ ಸುರೇಶ್ ಹಾಗೂ ಇನ್ನಿತರರು ಅಧಿಕಾರಿಗಳ ಬಳಿ ಮಾಹಿತಿ ಪಡೆದರು.