ಮಡಿಕೇರಿ, ಜ. ೨೦: ಕೊಡವ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿ ಮೂಲಕ ಕೋವಿ ವಿನಾಯಿತಿ ಪಡೆದವರಿಗೆ ಇಲ್ಲದ ಕಾನೂನನ್ನು ಜಿಲ್ಲಾಡಳಿತ ಹೇರುತ್ತಿದೆ, ಕೋವಿ ವಿನಾಯಿತಿ ಹಕ್ಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷಾಧಿಕಾರ ಹೊಂದಿರುವವರು ಒಂದಾಗಬೇಕೆAದು ಹಿರಿಯ ವಕೀಲ ಹಾಗೂ ‘ದಿ ಗ್ಯಾಲೆಂಟ್ ಕೊಡವ & ಹಿಸ್ ಸನ್’ ಪುಸ್ತಕದ ಲೇಖಕ ಪಾಲೆಕಂಡ ಎಸ್. ಸುಬ್ಬಯ್ಯ ಕರೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವರ ಜೀವನದಲ್ಲಿ ಕೋವಿ ವಿಶೇಷ ಪಾತ್ರ ವಹಿಸಿದೆ. ಕೊಡವರು ಸೇರಿದಂತೆ ಕೊಡಗಿನ ಇತರ ಜನಾಂಗಗಳಿಗೂ ಜಮ್ಮಾ ಹಿಡುವಳಿ ಮೂಲಕ ಬ್ರಿಟಿಷರು ಕೋವಿ ಹಕ್ಕು ನೀಡಿದ್ದಾರೆ. ೨೦೦ ವರ್ಷಗಳಿಗೂ ಹೆಚ್ಚು ಕಾಲದಿಂದ ಇರುವ ವಿಶೇಷ ಅಧಿಕಾರವನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಡಗಿನ ಜನ ಒಂದಾಗಿರಬೇಕು. ೨೦೨೯ ರ ತನಕ ಹಕ್ಕು ಅಭಾದಿತವಾಗಿ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಮಾಹಿತಿ ನೀಡಿದರು.

ಹಿಡುವಳಿ ಹೊಂದಿರುವ ಕುಟುಂಬದಲ್ಲಿ ಮಗು ಜನಿಸಿದ ನಂತರ ಕಾನೂನು ಪ್ರಕಾರ ಬಳುವಳಿಯಾಗಿ ಬಂದಿರುವ ಕೋವಿ ಹಕ್ಕು ಮುಂದುವರೆಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲಾಡಳಿತ ಇಲ್ಲದ ಕಾನೂನನ್ನು ತರುತ್ತಿದೆ. ಹಿಡುವಳಿ ಹೊಂದಿರುವವರು ವರ್ಷಕ್ಕೊಮ್ಮೆ ಪೊಲೀಸ್ ಇಲಾಖೆ ಮೂಲಕ ಕೋವಿಯನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಇದನ್ನು ಹೊರತುಪಡಿಸಿ ಚುನಾವಣೆ ವೇಳೆಯಲ್ಲಿ ಠೇವಣಿ ಇಡಬೇಕಾಗಿಲ್ಲ. ಲೈಸನ್ಸ್ ಪಡೆದು ಕೋವಿ ಖರೀದಿಸಿದವರಿಗೆ ಹಾಗೂ ಜಮ್ಮಾ ಹಿಡುವಳಿ ಮೂಲಕ ಕೋವಿ ವಿನಾಯಿತಿ ಪಡೆದವರಿಗೆ ಒಂದೆ ರೀತಿಯ ಕಾನೂನಿಲ್ಲ. ವಿನಾಯಿತಿ ಇರುವವರಿಗೆ ನಿಯಮ ಸಡಿಲಿಕೆ ಇದೆ. ವಿನಾಯಿತಿಯುಳ್ಳ ಕೋವಿಯನ್ನು ಕುಟುಂಬದೊಳಗೆ ನೀಡಲು ಜಿಲ್ಲಾಡಳಿತದಿಂದ ಯಾವುದೇ ದೃಢೀಕರಣ ಪತ್ರ ಬೇಕಾಗಿಲ್ಲ ಎಂದು ತಿಳಿಸಿದರು.

ಕೊಡಗು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಕೋವಿ ವಿನಾಯಿತಿ ದೊರೆತಿರುವುದು ಭಿಕ್ಷೆಯಲ್ಲ ಅದು ವಿಶೇಷ ಹಕ್ಕು ಎಂದ ಅವರು, ಕೋವಿ ನಮ್ಮ ಆಸ್ತಿಯಾಗಿದೆ. ಜಿಲ್ಲಾಡಳಿತದ ಕೋವಿ ವಿಭಾಗ(ಗನ್ ಸೆಕ್ಷನ್)ದಲ್ಲಿ ನುರಿತರು ನೇಮಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಜಮ್ಮಡ ಗಣೇಶ್ ಅಯ್ಯಣ್ಣ ಇದ್ದರು.