ವೀರಾಜಪೇಟೆ,ಜ.೨೦: ಸಾರ್ವಜನಿಕರ ಉಪಯೋಗಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಅಪಸ್ವರ ಬಂದ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕುಡಿಯುವ ನೀರಿನ ನಿರ್ವಾಹಣ ಯೋಜನೆಯಲ್ಲಿ ಅಂದಾಜು ರೂ.೫ ಲಕ್ಷ ವೆಚ್ಚದ ಅನುದಾನದಲ್ಲಿ ನಗರದ ದೊಡ್ಡಟ್ಟಿ ಚೌಕಿಯ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಶುದ್ದ ಕುಡಿಯುವ ನೀರಿನ ಘಟಕದ ಸ್ಥಳಕ್ಕೆ ಹಾಗೂ ನೀರು ಸರಬರಾಜು ಮಾಡುವ ಶಾಂತಾ ಚಲನಚಿತ್ರ ಮಂದಿರ ಬಳಿಯ ತೆರೆದ ಬಾವಿಯನ್ನು ಪರಿಶೀಲನೆ ಮಾಡಿ ಮಾತನಾಡಿದರು. ಮುಂದಿನ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿಗಳಿಗೆ ನಿರ್ದೇಶನ ಮಾಡಿದರು.

ಈ ಕುಡಿಯುವ ನೀರಿನ ಘಟಕವು ವಾರ್ಡ್ ೧ರಿಂದ ೫ ರವರೆಗಿನ ಸರ್ವರಿಗೂ ಉಪಯುಕ್ತವಾಗುತ್ತದೆ. ಈ ಸಂದರ್ಭ ಪಟ್ಟಣ ಪಂಚಾಯಿತಿಯ ಅಭಿಯಂತರರಾದ ಹೇಮ ಕುಮಾರ್, ಸೋಮಶೇಖರ್, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಹರ್ಷವರ್ಧನ್ ಕೆ.ಬಿ. ವಾರ್ಡ್ನ ಸದಸ್ಯೆ ಫಾಸೀಯ ತಬಸಂ, ಪ.ಪಂ ಸದಸ್ಯರಾದ ಅಬ್ದುಲ್ ಜಲೀಲ್, ಆಗಸ್ಟೀನ್ ಬೆನ್ನಿ, ಸಿ.ಕೆ ಪ್ರಥ್ವಿನಾಥ್ ಮತ್ತು ಸಾರ್ವಜನಿಕರು ಹಾಜರಿದ್ದರು.