ಮಡಿಕೇರಿ, ಜ. ೧೯: ಇತ್ತೀಚಿನ ದಿನಗಳಲ್ಲಿ ಮಕ್ಕಳು ಆನ್‌ಲೈನ್ ತರಗತಿ ಸಂಬAಧ ಮೊಬೈಲ್ ಬಳಕೆ ಮಾಡುತ್ತಿದ್ದು, ಇದನ್ನು ಕೆಲವು ದುರುಳರು ದುರುಪಯೋಗ ಮಾಡಿಕೊಂಡು ಮಕ್ಕಳನ್ನು ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡಿಸಿ ಅವರನ್ನು ನಂಬಿಸಿ ಹೆಣ್ಣು ಮಕ್ಕಳ ಫೋಟೋಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಕೊಂಡು ನಂತರ ಮಕ್ಕಳನ್ನು ಬೆದರಿಸಿ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾರೆ.
ಮಕ್ಕಳು ಇವರ ಆಮಿಷಗಳಿಗೆ ಒಪ್ಪದಿದ್ದಾಗ ಮಕ್ಕಳ ವಿವಿಧ ಭಂಗಿಯ ಫೋಟೋವನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತಿದ್ದು, ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಈ ಸಂಬAಧ ಈಗಾಗಲೇ ಎರಡು ದಿನಗಳ ಹಿಂದೆ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ರೀತಿ ಹೆಣ್ಣು ಮಕ್ಕಳ ಫೋಟೋಗಳನ್ನು ವಿವಿಧ ಭಂಗಿಯಲ್ಲಿ ವಿನಿಮಯ ಮಾಡಿಸಿಕೊಂಡು ಇತರರಿಗೆ ವೈರಲ್ ಮಾಡುವುದು ಅಪರಾಧವಾಗಿದ್ದು, ಇದಕ್ಕೆ ಕಾನೂನಿನಡಿಯಲ್ಲಿ ೬೭(ಎ), ೬೭(ಬಿ) ಐ.ಟಿ. ಆಕ್ಟ್ ಅಡಿಯಲ್ಲಿ ಮೊದಲ ಬಾರಿಗೆ ೫ ವರ್ಷಗಳವರೆಗಿನ ಸೆರೆವಾಸ ಮತ್ತು ೧೦ ಲಕ್ಷ ರೂ ದಂಡ, ೨ನೇ ಬಾರಿಗೆ ಮತ್ತು ನಂತರದಲ್ಲಿ ೭ ವರ್ಷಗಳವರೆಗಿನ ಸೆರೆವಾಸ ೧೦ ಲಕ್ಷ ರೂ. ದಂಡದ ಶಿಕ್ಷೆ ಇದ್ದು, ಅಲ್ಲದೆ ಪೋಕ್ಸೋ ಕಲಂ ೮, ೧೦, ೧೨ ರಡಿಯಲ್ಲಿ ೩ ರಿಂದ ೭ ವರ್ಷಗಳ ವರೆಗಿನ ಸೆರೆವಾಸ ಮತ್ತು ದಂಡದ ಶಿಕ್ಷೆ ವಿಧಿಸಬಹುದಾಗಿದೆ.
ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು. ಅಲ್ಲದೆ ಈ ರೀತಿ ಫೋಟೋಗಳು ವೈರಲ್ ಆಗಿರುವುದು ಸಾರ್ವಜನಿಕರು, ಶಾಲಾ - ಕಾಲೇಜು ಮುಖ್ಯಸ್ಥರು, ಶಿಕ್ಷಕರು, ಪೋಷಕರ ಗಮನಕ್ಕೆ ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ, ಮಕ್ಕಳ ವಿಶೇಷ ಪೊಲೀಸ್ ಘಟಕ ಅಥವಾ ಮಕ್ಕಳ ಸಹಾಯವಾಣಿ ೧೦೯೮ ಆಗಲಿ, ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕೂಡಲೇ ಮಾಹಿತಿ ನೀಡಿ ದುರುಳರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ.