ಮಡಿಕೇರಿ, ಜ. ೧೯: ಸಮಾಜದ ಸಂಕಷ್ಟಗಳಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದ್ದು, ಯಾವುದೇ ರೀತಿಯ ನೈಸರ್ಗಿಕ ವಿಕೋಪಕ್ಕೆ ನೆರವಾಗಲು ಎನ್.ಸಿ.ಸಿ. ಸದಾ ಸಿದ್ಧವಾಗಿದೆ ಎಂದು ೧೯ನೇ ಕರ್ನಾಟಕ ಎನ್.ಸಿ.ಸಿ. ಬೆಟಾಲಿಯನ್‌ನ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಅವರು ಸೋಮವಾರ ತಿಳಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಐದು ದಿನಗಳ ಕಾಲ ನಡೆಯಲಿರುವ ವಾರ್ಷಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ಸಂದರ್ಭದಲ್ಲಿ ಎನ್.ಸಿ.ಸಿ. ವತಿಯಿಂದ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಜನಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಕೋವಿಡ್ ೧೯ ಸಾಂಕ್ರಾಮಿಕ ಸಂದರ್ಭದಲ್ಲಿಯೂ ಎನ್.ಸಿ.ಸಿ.ಯಿಂದ ಜನರಿಗೆ ನೆರವು ನೀಡುವ ಕಾರ್ಯಗಳು ಆಗಿದ್ದು, ಮುಂದಿನ ದಿನಗಳಲ್ಲಿಯೂ ನಮ್ಮ ಜವಾಬ್ದಾರಿ ಮತ್ತಷ್ಟು ವಿಸ್ತರಿಸಲಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಕೆಡೆಟ್‌ಗಳಿಗೆ ಬಂದೂಕು ಬಳಕೆ ತರಬೇತಿಯೊಂದಿಗೆ ಸಂವಹನ ಕಲೆ, ವ್ಯಕ್ತಿತ್ವ ವಿಕಸನ ಕೌಶಲ್ಯಗಳನ್ನೂ ಕಲಿಸಿಕೊಡಲಾಗುತ್ತದೆಯಲ್ಲದೆ, ನೈಸರ್ಗಿಕ ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸೌಜನ್ಯದಿಂದ ನೆರವಾಗುವ ಕೌಶಲ್ಯವನ್ನೂ ಕಲಿಸಿಕೊಡಲಾಗುತ್ತದೆ ಎಂದು ವಿವರಿಸಿದರು.

ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳಾದ ಇಂದ್ರಜಿತ್, ಯಶಸ್ವಿ ಅವರು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿರುವುದು ಹಾಗೂ ಮತ್ತೋರ್ವ ಕೆಡೆಟ್ ಭೂಮಿಕ, ಯೂತ್ ಎಕ್ಸ್ಚೇಂಜ್ ಪ್ರೋಗ್ರಾಂಗೆ ಆಯ್ಕೆಯಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

ತಮ್ಮಲ್ಲಿರುವ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆöÊರ್ಯ ಮೂಡಿಸಲು ಎನ್.ಸಿ.ಸಿ.ಯು ತುಂಬಾ ಅನುಕೂಲಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇನ್ನಿತರ ವಿದ್ಯಾರ್ಥಿಗಳು ಕೂಡ ಎನ್.ಸಿ.ಸಿ.ಗೆ ಸೇರಲು ಪ್ರೇರಣೆಯಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳು ಎನ್.ಸಿ.ಸಿ.ಯಲ್ಲಿ ತೊಡಗಿಕೊಳ್ಳುವುದು ಜೀವನದಲ್ಲಿ ಯಶಸ್ವಿಯಾಗಲು ಅನುಕೂಲ ವಾಗುವುದಲ್ಲದೆ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಪ್ರತೀ ವರ್ಷವೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ರಾಷ್ಟಿçÃಯ ಮಟ್ಟದಲ್ಲಿ ಶಿಬಿರಗಳಿಗೆ ಆಯ್ಕೆಯಾಗುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುವುದ ರೊಂದಿಗೆ ಜಿಲ್ಲೆಗೆ, ಕಾಲೇಜಿಗೆ ಕೀರ್ತಿಯನ್ನು ತಂದಿರುವುದು ಶ್ಲಾಘನೀಯ ಎಂದರು.

ಕಾಲೇಜಿನ ಎನ್‌ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ರಾಘವ ಬಿ ಅವರು ಶಿಬಿರದ ಸ್ಥೂಲ ಪರಿಚಯ ನೀಡುತ್ತಾ, ಇಲ್ಲಿ ವಿದ್ಯಾರ್ಥಿಗಳಿಗೆ ಮ್ಯಾಪ್ ರೀಡಿಂಗ್, ವ್ಯಕ್ತಿತ್ವ ವಿಕಸನ ತರಬೇತಿ, ಬಂದೂಕು ತರಬೇತಿ, ಸೇನೆಯಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು.

ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭೂಮಿಕ. ಬಿ.ಜಿ. ಅವರು ನಿರೂಪಣೆ ಮಾಡಿದರು ಹಾಗೂ ಅಂತಿಮ ವಾಣಿಜ್ಯ ವಿಭಾಗದ ಯಶೋಧ ಎ.ಕೆ. ಅವರು ವಂದಿಸಿದರು.