*ಕೊಡ್ಲಿಪೇಟೆ, ಜ. ೧೯: ಕೊಡಗಿನ ಕೊಡ್ಲಿಪೇಟೆಯಿಂದ ನೆರೆಯ ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆಯಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಜಾಗದ ಸಮಸ್ಯೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ರಸ್ತೆ ನಿರ್ಮಿಸಲು ಉದ್ದೇಶಿಸಿರುವ ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕೆAದು ಸಾರ್ವಜನಿಕರು ಆಗ್ರಹಿಸಿದರು.

ರಸ್ತೆ ಸಮಸ್ಯೆ ಹಾಗೂ ಸೇತುವೆಯ ಬಳಕೆಗೆ ಸಂಬAಧಿಸಿದAತೆ ಇಂದು ಹೇಮಾವತಿ ನೀರಾವರಿ ನಿಗಮದ ಅಭಿಯಂತರರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ಜಮಾಯಿಸಿ ರಸ್ತೆ ಸಮಸ್ಯೆಯ ಬಗ್ಗೆ ಚರ್ಚಿಸಿದರು.

ಕೆಳಕೊಡ್ಲಿ ಗ್ರಾಮದ ಸರ್ವೆ ನಂ ೧೪೧ ರಲ್ಲಿ ದೇವರ ಬನದ ೭.೭೨ ಸೆಂಟ್ ಜಾಗವಿದ್ದು ಇದರಲ್ಲಿ ೨.೭೨ ಸೆಂಟ್ ಜಾಗ ಶ್ರೀ ಮಾವಿನ ಕಟ್ಟೆ ಬಸವಣ್ಣ ದೇವಸ್ಥಾನಕ್ಕೆ ಸೇರಿದ್ದಾಗಿದೆ. ಸದರಿ ಜಮೀನಿಗೆ ಸೇರಿರುವ ದೇವಸ್ಥಾನದ ಮುಂಭಾಗದಲ್ಲಿ ಸದ್ಯ ಕಚ್ಚಾ ರಸ್ತೆಯನ್ನು ಸಾರ್ವಜನಿಕರು ಬಳಸುತ್ತಿದ್ದು, ಇದು ಸಂಚಾರಕ್ಕೆ ಆನಾನೂಕೂಲವಾಗಿದೆ. ಈ ಹಿನ್ನೆಲೆ ಉದ್ದೇಶಿತ ರಸ್ತೆಯ ಜಾಗದಲ್ಲೇ ನೂತನ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನ ಪ್ರಮುಖರಾದ ಡಿ.ಇ. ಕೃಷ್ಣಪ್ಪ ಅಭಿಪ್ರಾಯಿಸಿದರು.

ಪುರಾತನ ಇತಿಹಾಸವಿರುವ ಶ್ರೀ ಮಾವಿನಕಟ್ಟೆ ಬಸವಣ್ಣ ದೇವಸ್ಥಾನದ ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನದ ಮುಂಭಾಗ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸದೆ, ಒತ್ತುವರಿದಾರರು ಕಬಳಿಸಿರುವ ಜಾಗವನ್ನು ಯಾರ ಪ್ರಭಾವಕ್ಕೂ ಒಳಗಾಗದೆ ಸರ್ವೆ ಮಾಡಿ ತೆರವುಗೊಳಿಸಿ ರಸ್ತೆ ನಿರ್ಮಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಬಿ. ರಮೇಶ್ ಹಾಗೂ ಪ್ರಮುಖರಾದ ತ್ಯಾಗರಾಜ್ ಒತ್ತಾಯಿಸಿದರು.

ದಾಖಲಾತಿಗಳ ಪ್ರಕಾರ ಒತ್ತುವರಿಯಾಗಿರುವ ಜಾಗ ಸರಕಾರಿ ಜಾಗವಾಗಿದ್ದು, ರಸ್ತೆಯ ಉದ್ದೇಶಕ್ಕಾಗಿ ಇದನ್ನು ತೆರವುಗೊಳಿಸಲು ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಮನ ಹರಿಸಬೇಕೆಂದು ಗ್ರಾಮ ಪಂಚಾಯತ್ ಸದಸ್ಯ ಕೆ.ಆರ್.ಚಂದ್ರಶೇಖರ್ ಆಗ್ರಹಿಸಿದರು.

ಜಾಗದ ಸಮಸ್ಯೆಯಿಂದಾಗಿ ಸಾಮಗ್ರಿಗಳನ್ನು ಸ್ಥಳದಲ್ಲಿ ಶೇಖರಿಸಿದ್ದರೂ, ಕಾಮಗಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಬಾರಿ ಯಂತ್ರಗಳನ್ನು ತಂದು ವಾಪಸ್ ತೆರಳಲಾಗಿದೆ. ಇದರಿಂದ ತಮಗೆ ನಷ್ಟವಾಗುತ್ತಿದೆ. ರಸ್ತೆ ಜಾಗದ ಕುರಿತು ಕಂದಾಯ ಇಲಾಖೆ ಹಾಗೂ ಸರ್ವೆ ಅಧಿಕಾರಿಗಳಿಗೆ ಹೇಮಾವತಿ ನೀರಾವರಿ ನಿಗಮದ ಅಭಿಯಂತರರು ಪತ್ರ ಬರೆದಿದ್ದಾರೆ. ತುರ್ತಾಗಿ ಸಮಸ್ಯೆ ಬಗೆಹರಿದರೆ ರಸ್ತೆ ಕಾಮಗಾರಿ ಕೈಗೊಳ್ಳಲಾಗುವದು ಎಂದು ಗುತ್ತಿಗೆದಾರ ಪರಮೇಶ್ ತಿಳಿಸಿದರು.

ರಸ್ತೆ ಅಗಲೀಕರಣಕ್ಕೆ ತಡೆಯಾಗಿರುವ ಮರಗಳನ್ನು ತೆರವುಗೊಳಿಸಲು ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನಾ ವರದಿಯೊಂದಿಗೆ ಡಿ.ಎಫ್.ಓ.ರವರಿಗೆ ಅರ್ಜಿ ಸಲ್ಲಿಸಿದ್ದು, ಶೀಘ್ರ ಕಡತ ವಿಲೇವಾರಿ ಮಾಡಿ, ರಸ್ತೆ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ರೈತ ಸಂಘದ ಸಂಚಾಲಕ ಸೋಮಣ್ಣ ಆಗ್ರಹಿಸಿದರು.

ಈ ಸಂದರ್ಭ ಹೇಮಾವತಿ ನೀರಾವರಿ ನಿಗಮದ ಅಭಿಯಂತರರಾದ ಪುಟ್ಟಸ್ವಾಮಿ, ಕೊಡ್ಲಿಪೇಟೆ ಅರಣ್ಯಾಧಿಕಾರಿ ಗೊವಿಂದ್ ರಾಜ್ ಮತ್ತು ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರಸನ್ನ ಡಿ.ಕೆ, ಗೀತಾ ತ್ಯಾಗರಾಜ್, ಅಶ್ವಿನಿ ಮಂಜುನಾಥ್, ಪ್ರಮುಖರಾದ ಮಹೇಶ್ ಕೆ.ಬಿ., ಕರುಣಾಕರ್ ,ರಾಜೇಶ್ ,ಶರತ್, ಚೇತನ್, ಸೌರವ್, ಕೇಶವಮೂರ್ತಿ ಶಾಂತಪುರ, ಮಂಜುನಾಥ್ ದೊಡ್ಡಕೊಡ್ಲಿ ಸೇರಿದಂತೆ ಇತರರು ಹಾಜರಿದ್ದರು.

ಬಳಕೆಗಿಲ್ಲದ ಸೇತುವೆ: ಕೊಡ್ಲಿಪೇಟೆಯ ಕೆಳಕೊಡ್ಲಿಯ ಮೂಲಕ ಹಾಸನ ಜಿಲ್ಲೆಯ ಶಿರಗಾವರ ಗ್ರಾಮ ಮೂಲಕ ರಾಜ್ಯ ಹೆದ್ದಾರಿ ಸಂಪರ್ಕಿಸುವAತೆ ಹೇಮಾವತಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಸೇತುವೆ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ನಾಲ್ಕು ವರ್ಷವಾದರೂ ರಸ್ತೆಗೆ ಜಾಗದ ಸಮಸ್ಯೆ ಉಂಟಾಗಿ ಸಾರ್ವಜನಿಕರ ಬಳಕೆಯಿಂದ ದೂರ ಉಳಿದಿದೆ.

ಕೆಳಕೊಡ್ಲಿಯಿಂದ ನೂತನ ಸೇತುವೆಗೆ ಸಂಪರ್ಕ ಕಲ್ಪಿಸುವ ಒಂದು ಕಿಲೋಮೀಟರ್ ರಸ್ತೆ ನಿರ್ಮಿಸಲು ಹೆಚ್.ಆರ್.ಪಿ. ಇಲಾಖೆಯಿಂದ ಮೂರು ವರ್ಷದ ಹಿಂದೆ ಕ್ರಿಯಾ ಯೋಜನೆ ತಯಾರಿಸಿದ್ದು ಟೆಂಡರ್ ಆಗಿ ಎರಡು ವರ್ಷವಾದರೂ ಜಾಗದ ಸಮಸ್ಯೆಯಿಂದಾಗಿ ಕಾಮಗಾರಿ ಪ್ರಾರಂಭವಾಗಿಲ್ಲ. ಈ ರಸ್ತೆ ಹಾದುಹೋಗುವಲ್ಲಿ ಸ್ಥಳೀಯ ರೈತರು ಜಾಗವನ್ನು ಬಿಟ್ಟುಕೊಟ್ಟಿದ್ದರೂ, ಈರ್ವರು ಮಾತ್ರ ಜಾಗ ಬಿಡದ ಹಿನ್ನೆಲೆ ರಸ್ತೆ ಕಾಮಗಾರಿ ಹಾಗೂ ಸೇತುವೆ ಉದ್ಘಾಟನೆ ಕಾರ್ಯ ನೆನೆಗುದಿಗೆ ಬೀಳುವಂತಾಗಿದೆ.