ಕುಶಾಲನಗರ, ಜ ೧೯: ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ನಡುವೆ ಅಲ್ಲಿನ ಖಾಸಗಿ ವಿದ್ಯುತ್ ಉತ್ಪಾದನಾ ಘಟಕ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಕಳೆದ ಮೂರು ವರ್ಷಗಳಿಂದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಬಿದ್ದು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಾಗಿದ್ದರೂ ಸಮರ್ಪಕವಾಗಿ ನೀರಿನ ನಿರ್ವಹಣೆ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ೩೦.೭ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು ಈ ಬಾರಿ ಗುರಿಮುಟ್ಟಲು ತೊಡಕು ಉಂಟಾಯಿತು ಎಂದು ಘಟಕದ ಪ್ರಧಾನ ವ್ಯವಸ್ಥಾಪಕರಾದ ಶಿವಸುಬ್ರಮಣ್ಯಂ ಮಾಹಿತಿ ನೀಡಿದ್ದಾರೆ. ಹಾರಂಗಿ ಅಣೆಕಟ್ಟೆಯಲ್ಲಿ ಗರಿಷ್ಠ ಸಂಗ್ರಹ ಪ್ರಮಾಣ ೮.೫ ಟಿಎಂಸಿ ಸಾಮರ್ಥ್ಯ ಹೊಂದಿದ್ದರೂ ಪ್ರಸಕ್ತ ಅಣೆಕಟ್ಟೆಯಲ್ಲಿ ಕೇವಲ ೨.೧ ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಕಂಡುಬAದಿದೆ. ಈ ಸಾಲಿನಲ್ಲಿ ಒಟ್ಟು ೨೬.೧೫ ಟಿಎಂಸಿ ಪ್ರಮಾಣದ ನೀರು ಹರಿದುಬಂದಿದ್ದು ನದಿಗೆ ೧೫.೨೪ ಟಿಎಂಸಿ ನೀರು ಹರಿಸಲಾಗಿದೆ. ಕಾಲುವೆ ಮೂಲಕ ೧೦.೯೦ ಟಿಎಂಸಿ ನೀರು ಹರಿದಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಜಲಾಶಯದಲ್ಲಿ ೨.೭೫ ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಕಂಡುಬAದಿತ್ತು.

ಎನರ್ಜಿ ಡೆವಲೆಪ್‌ಮೆಂಟ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು ಮುಖ್ಯ ಘಟಕದಲ್ಲಿ ೯ ಮೆ.ವ್ಯಾ. ಪ್ರಮಾಣದ ವಿದ್ಯುತ್ ಉತ್ಪಾದನೆ ಮತ್ತು ಎರಡನೇ ಘಟಕದಲ್ಲಿ ೬ ಮೆವ್ಯಾ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶವಿದೆ. ಜುಲೈನಿಂದ ಮೂರು ತಿಂಗಳ ಕಾಲ ಮಾತ್ರ ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದಿಸಿದರೆ ಮುಖ್ಯ ಘಟಕದಲ್ಲಿ ಡಿಸೆಂಬರ್ ಅಂತ್ಯದ ತನಕ ಉತ್ಪಾದನೆ ಸಾಧ್ಯವಾಗುತ್ತದೆ. ಕನಿಷ್ಠ ೨೦೦ ಕ್ಯೂಸೆಕ್ಸ್ ನೀರಿನ ಹರಿವು ದೊರೆತಲ್ಲಿ ಘಟಕ ಕೆಲಸ ನಿರ್ವಹಿಸಲು ಸಾಧ್ಯ. ಆದರೆ ಜಲಾಶಯದಲ್ಲಿ ನೀರಿನ ಮಟ್ಟ ಬಹುತೇಕ ಕುಸಿದಿರುವ ಹಿನ್ನಲೆಯಲ್ಲಿ ಕಳೆದ ಡಿಸೆಂಬರ್ ಅಂತ್ಯದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.

ವರ್ಷದಲ್ಲಿ ಮೂರು ಬಾರಿ ಜಲಾಶಯ ತುಂಬುವ ಉದ್ದೇಶ ಹೊತ್ತು ಅಣೆಕಟ್ಟೆ ನಿರ್ಮಾಣವಾಗಿದ್ದು ಪ್ರಸಕ್ತ ಅಕಾಲಿಕ ಮಳೆ ಹಾಗೂ ಪ್ರವಾಹದೋಪಾದಿ ಮಳೆ ಸುರಿವ ಹಿನ್ನಲೆಯಲ್ಲಿ ಜಲಾಶಯದಿಂದ ನದಿಗೆ ನೀರಿನ ಹರಿವು ನಿಯಮಾವಳಿ ಪ್ರಕಾರ ಹರಿಸಲು ತೊಂದರೆ ಉಂಟಾಗುತ್ತಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣ ಎಂದು ಹಾರಂಗಿ ಜಲಾಶಯ ಉಸ್ತುವಾರಿ ಅಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಉತ್ಪಾದನಾ ಘಟಕ ೨೦೧೮ ರಲ್ಲಿ ೨೯.೭ ಮಿಲಿಯನ್ ಯೂನಿಟ್‌ಗಳಷ್ಟು ವಿದ್ಯುತ್ ಉತ್ಪಾದಿಸಿದರೆ ೨೦೧೯ ರಲ್ಲಿ ೨೩.೮ ಮಿಲಿಯನ್ ಯೂನಿಟ್ ಉತ್ಪಾದನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಉತ್ಪಾದನಾ ಗುರಿ ಸಾಧಿಸುವಲ್ಲಿ ನೀರಿನ ಕೊರತೆ ಎದುರಾಗುತ್ತಿದೆ ಎಂದು ಘಟಕದ ಪ್ರಧಾನ ವ್ಯವಸ್ಥಾಪಕರಾದ ಶಿವಸುಬ್ರಮಣ್ಯಂ ತಿಳಿಸಿದ್ದಾರೆ. - ಚಂದ್ರಮೋಹನ್