ಮಡಿಕೇರಿ, ಜ. ೧೯: ಕರಿಕೆ ಗ್ರಾಮದ ದೊಡ್ಡಚೇರಿ ಎಂಬಲ್ಲಿ ಗುತ್ತಿಗೆದಾರರೊಬ್ಬರು ಲೋಕೋಪ ಯೋಗಿ ಇಲಾಖೆಯ ಎಸ್.ಪಿ.ಪಿ, ಟಿ.ಎಸ್.ಪಿ. ಅನುದಾನದಿಂದ ನಿಯಮ ಬಾಹಿರವಾಗಿ ತಮ್ಮ ಸ್ವಂತ ಮನೆಗೆ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ ಸದಸ್ಯ ಎನ್. ಬಾಲಚಂದ್ರನ್ ನಾಯರ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು ದಾಖಲೆಯಲ್ಲಿ ಕರಿಕೆ ಗ್ರಾಮದ ಗೋಪಾಲ ಎಂಬವರ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಎಂದು ನಮೂದಾಗಿದ್ದು, ಈ ರಸ್ತೆಗೆ ರೂ.೫ ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಆದರೆ ಕರಿಕೆ ಗ್ರಾಮದಲ್ಲಿ ಈ ಹೆಸರಿನಲ್ಲಿ ಯಾವುದೇ ಕಾಲೋನಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರಿಕೆ ಗ್ರಾಮದಲ್ಲಿ ಅಂದಾಜು ಹತ್ತು ಪರಿಶಿಷ್ಟ ಜಾತಿ ಕಾಲೋನಿಗಳಿದ್ದು, ಈ ಕಾಲೋನಿಗೆ ಮಾಡ ಬೇಕಾದ ರಸ್ತೆಯನ್ನು ಬಿ.ಕೆ. ರಮೇಶ್ ಎಂಬ ಗುತ್ತಿಗೆದಾರ ತಮ್ಮ ಸ್ವಂತ ಮನೆಗೆ ಮಾಡಿ ಕೊಳ್ಳುತ್ತಿದ್ದಾರೆ. ಈ ಮೊದಲು ಇದೇ ರೀತಿ ಎಸ್.ಸಿ.ಪಿ, ಟಿ.ಎಸ್.ಪಿ. ಅನುದಾನದಿಂದಲೇ ರಸ್ತೆಯನ್ನು ಮಾಡಿ ಕೊಂಡಿದ್ದು, ಈಗ ಅದರ ಮುಂದುವರೆದ ಭಾಗದ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸಂಬAಧಪಟ್ಟ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೂ.೫ ಲಕ್ಷ ಅನುದಾನದಲ್ಲಿ ನೈಜ ಎಸ್.ಸಿ ಕಾಲೋನಿಗೆ ರಸ್ತೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳದೆ ನಿಯಮ ಬಾಹಿರವಾಗಿ ಕಾಮಗಾರಿ ಮುಂದುವರೆದರೆ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಮತ್ತು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎನ್. ಬಾಲಚಂದ್ರನ್ ನಾಯರ್ ಎಚ್ಚರಿಕೆ ನೀಡಿದ್ದಾರೆ.