ಮಡಿಕೇರಿ, ಜ. ೧೯: ಪ್ರಸ್ತುತ ಮಾದಾಪುರದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದ ಆಶ್ರಮದ ವತಿಯಿಂದ ರಾಮಕೃಷ್ಣ ಮಿಷನ್ ಕೊಡಗು ಪ್ರವಾಹ ಪರಿಹಾರ ಮತ್ತು ಪುನರ್ವಸತಿ ಯೋಜನೆಯ ಅಂಗವಾಗಿ ಸಾಂಸ್ಕೃತಿಕ ಭವನವನ್ನು ಕಟ್ಟಲು ತೀರ್ಮಾನಿಸಲಾಗಿದ್ದು, ಇದರ ಭೂಮಿ ಪೂಜೆಯನ್ನು ತಾ. ೨೦ ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರೂ ಹಾಗೂ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನಿನ ಟ್ರಸ್ಟಿಗಳೂ ಆದ ಸ್ವಾಮಿ ಮುಕ್ತಿದಾನಂದಜಿಯವರು ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನಿನ ಸಹ - ಪ್ರಧಾನ ಕಾರ್ಯದರ್ಶಿ ಆದ ಸತ್ಯೇಶಾನಂದಜಿ ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚುರಂಜನ್, ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಕ.ರಾ.ಪ್ರಾ.ಶಾ.ಶಿ ಸಂಘ ಕೊಡಗು ಘಟಕದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಮಾದಾಪುರದ ಉದ್ಯಮಿ ಸಂದೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.