ಕೂಡಿಗೆ, ಜ. ೧೯: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಚಿರತೆಯೊಂದು ಕಳೆದ ರಾತ್ರಿ ೮ ಗಂಟೆ ಸಮಯದಲ್ಲಿ ಮುಖ್ಯ ರಸ್ತೆಯಲ್ಲಿ ಗ್ರಾಮದ ಒಳಗೆ ಹೋಗುತ್ತಿರುವುದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬಾಣಾವಾರದ ರಸ್ತೆಯ ಮೂಲಕ ಬಂದಿರುವ ಚಿರತೆಯು ಹಾಸನ ಹೆದ್ದಾರಿಯನ್ನು ದಾಟಿಕೊಂಡು ಹೆಬ್ಬಾಲೆ ಕಲ್ಯಾಣ ಮಂಟಪದ ದಾರಿಯಲ್ಲಿ ಗ್ರಾಮದ ಒಳಗೆ ಹೋಗಿರುವ ಹೆಜ್ಜೆ ಗುರುತುಗಳು ಇವೆ. ಅಲ್ಲದೆ ಇದೇ ಮಾರ್ಗವಾಗಿ ಶಿರಂಗಾಲ ಕಡೆಯಿಂದ ಹೆಬ್ಬಾಲೆಗೆ ಬರುವವರು ಚಿರತೆಯನ್ನು ನೋಡಿದವರು, ನಂತರ ಗ್ರಾಮಸ್ಥರಿಗೆ ತಿಳಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.