ಕಣಿವೆ, ಜ. ೧೯: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಬಸವೇಶ್ವರ ಬಡಾವಣೆಯ ನಿವಾಸಿಗಳ ಗೋಳು ಕೇಳುವವರೇ ಇಲ್ಲ. ಹೇಳಿ ಕೇಳಿ ಕುಶಾಲನಗರ ಪಟ್ಟಣ ಬೆಳೆಯುತ್ತಿರುವುದೇ ಈ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ.

ನೂತನ ತಾಲೂಕು ಕೇಂದ್ರ ಕುಶಾಲನಗರದ ಕೂಗಳತೆಯಲ್ಲಿರುವ ಈ ಮುಳ್ಳುಸೋಗೆಯ ಬಸವೇಶ್ವರ ಬಡಾವಣೆಯಲ್ಲಿ ಕನಿಷ್ಟ ಎಂದರೂ ಒಂದು ಸಾವಿರ ಜನಸಂಖ್ಯೆ ಇದೆ. ಒಂದು ರೀತಿಯಲ್ಲಿ ಸ್ಥಿತಿವಂತರೇ ಅಧಿಕ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದಾರೆ.

ಅಂದರೆ ಕೊಡಗು ಜಿಲ್ಲೆಯ ಮೂಲೆ ಮೂಲೆಗಳಲ್ಲಿರುವ ಕಾಫಿ ಬೆಳೆಗಾರರು, ಸರ್ಕಾರದ ನಿವೃತ್ತ ನೌಕರರು, ಸೇನೆಯಲ್ಲಿ ಸೇವೆ ಮಾಡಿ ಮರಳಿರುವವರು, ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಹೀಗೆ ಬೇರೆ ಬೇರೆ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಪಾರ ಮಂದಿ ಈ ಬಸವೇಶ್ವರ ಬಡಾವಣೆಯಲ್ಲಿ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಟ್ಟಿಕೊಂಡು ವಾಸವಿದ್ದಾರೆ.

ಕೆಲವರು ಕಟ್ಟಿದ ಮನೆಗಳನ್ನು ಬಾಡಿಗೆಗೆ ಕೊಟ್ಟು ತೋಟದ ಮನೆಗಳಲ್ಲೂ ಇದ್ದಾರೆ. ಕುಶಾಲನಗರ ಪಟ್ಟಣದ ಹೃದಯ ಭಾಗದಿಂದ ಒಂದು ಕಿ.ಮೀ. ದೂರದಲ್ಲಿರುವ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕೇಂದ್ರದಿAದಲೂ ಒಂದು ಕಿ.ಮೀ. ದೂರದ ಎತ್ತರದ ಪ್ರದೇಶದ ಈ ಬಡಾವಣೆಯ ನಿವಾಸಿಗಳು ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ರಸ್ತೆಯೇ ಇಲ್ಲ

ಉದ್ದಗಲಕ್ಕೆ ಒಂದು ಕಿಮೀ ವ್ಯಾಪ್ತಿಯ ವಿಸ್ತೀರ್ಣ ಹೊಂದಿರುವ ಈ ಬಸವೇಶ್ವರ ಬಡಾವಣೆಯ ನಿವಾಸಿಗಳು ಸಂಚಾರಕ್ಕೆ ಸೂಕ್ತವಾದ ರಸ್ತೆಯಿಲ್ಲದೇ ಪರಿತಪಿಸುತ್ತಿದ್ದಾರೆ. ಕಳೆದ ಒಂದೂವರೆ ದಶಕದ ಹಿಂದೆ ಇಲ್ಲಿ ಬಡಾವಣೆ ಮಾಡಿದಾಗ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತದ್ದರಿಂದ ಸರಿಯಾಗಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳಿಗೆ ಬೇಕಾದ ಜಾಗವನ್ನು ಬಡಾವಣೆಯ ನಿರ್ಮಾತೃಗಳಿಂದ ಬಿಡಿಸದ ಕಾರಣ ಕಿಷ್ಕಿಂದೆಯಾಗಿರುವ ಇಲ್ಲಿನ ರಸ್ತೆಗಳು ಮೊದಲೇ ಕಿಷ್ಕಿಂದೆಯಾಗಿವೆ. ಜೊತೆಗೆ ಸಂಪರ್ಕ ರಸ್ತೆಗಳು ಕೂಡ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರವಾಗಿವೆ.

ಜೊತೆಗೆ ಸ್ಥಳೀಯ ಪಂಚಾಯಿತಿ ಆಡಳಿತ ಸೂಕ್ತ ಹಾಗೂ ಸುವ್ಯವಸ್ಥಿತವಾದ ರಸ್ತೆಗಳನ್ನು ನಿರ್ಮಿಸದ ಕಾರಣ ಎಲ್ಲೋ ಕಾಡಿನೊಳಗೆ ಇದ್ದಂತೆ ಇಲ್ಲಿನ ವಾಸಿಗಳು ಬದುಕುತ್ತಿದ್ದಾರೆ. ಇದ್ದ ಕಿರಿದಾದ ಹರುಕು - ಮುರುಕು ರಸ್ತೆಯ ಮಧ್ಯೆ ಒಳಚರಂಡಿ ಮಂಡಳಿಯವರು ರಸ್ತೆಯನ್ನೆಲ್ಲಾ ಅಗೆದು ಬಗೆದು ತೆಗೆದು ಹಾಕಿ ಹಾಳು ಮಾಡಿದ್ದಾರೆ. ಜೊತೆಗೆ ರಸ್ತೆಯ ಮಧ್ಯೆ ಅಲ್ಲಲ್ಲಿ ಒಳಚರಂಡಿಯ ‘ಮ್ಯಾನ್ ಹೋಲ್’ಗಳನ್ನು ನಿರ್ಮಿಸಿ ಹಾಗೇ ಬಿಟ್ಟಿರುವುದರಿಂದ ಇಲ್ಲಿನ ಬಹುತೇಕ ಜನ ತಮ್ಮ ಮನೆಗಳಿಂದ ಕಾರುಗಳನ್ನೇ ಮನೆಯ ಹೊರಗೆ ತೆಗೆಯುತ್ತಿಲ್ಲ. ಕಾರು ಹೊರ ತೆಗೆದರೆ ಗುಂಡಿ ಬಿದ್ದ ರಸ್ತೆಗಳು ಒಂದೆಡೆಯಾದರೆ ಕಾರಿನ ತಳಭಾಗಕ್ಕೆ ಮ್ಯಾನ್ ಹೋಲ್‌ಗಳ ಮುಚ್ಚಳ ತಾಗಿ ಕಾರುಗಳು ಹಾನಿಯಾಗುವ ಭಯ ಮತ್ತೊಂದೆಡೆ. ಕಾರುಗಳಿರಲೀ ಜನರ ಕಾಲುಗಳು ಕೂಡ ಹೆಜ್ಜೆ ಇಡದಷ್ಟರ ಮಟ್ಟಿಗೆ ಇಲ್ಲಿನ ರಸ್ತೆಗಳು ಬಾಯ್ದೆರೆದಿವೆ.

ಚರಂಡಿಗಳೇ ಇಲ್ಲ

ಈ ಬಸವೇಶ್ವರ ಬಡಾವಣೆಯಲ್ಲಿ ರಸ್ತೆಗಳೇನೋ ಸರಿಯಿಲ್ಲ ಸರಿ. ಚರಂಡಿಗಳಾದರೂ ಇವೆಯಾ ಎಂದರೆ ಅದೂ ಕೂಡ ಇಲ್ಲಿ ನಿರ್ಮಾಣವೇ ಆಗಿಲ್ಲ. ಕುಶಾಲನಗರದಲ್ಲಿ ನಿವೇಶನ ತೆಗೆದು ಸುಂದರವಾದ ಮನೆಯೊಂದನ್ನು ಕಟ್ಟಿ ವಾಸವಿರುವ ಕನಸು ಕಟ್ಟಿದ ಅನೇಕರು ಪಂಚಾಯಿತಿ ಕೃಪಾ ಪೋಷಿತ ಅವ್ಯವಸ್ಥೆಗಳಲ್ಲಿ ಸಿಲುಕಿ ಹಿಡಿ ಶಾಪ ಹಾಕುತ್ತಿದ್ದಾರೆ.

ಮನೆಗಳಲ್ಲಿ ದಿನಂಪ್ರತೀ ಉತ್ಪತ್ತಿಯಾಗುವ ಸ್ನಾನದ ಮನೆ, ಅಡುಗೆ ಮನೆ ಹಾಗೂ ಇತರೇ ತ್ಯಾಜ್ಯ ನೀರು ಹರಿಯಲು ಚರಂಡಿ ಇಲ್ಲದ ಕಾರಣ ಹರುಕು ಮುರುಕಾದ ರಸ್ತೆಗಳಲ್ಲಿಯೇ ಚರಂಡಿ ನೀರನ್ನು ಕೆಲವರು ಹರಿಸಿದರೆ, ಇನ್ನು ಕೆಲವರು ತಮ್ಮ ತಮ್ಮ ಮನೆಗಳ ಪಕ್ಕ ಹರಿಸಿರುವ ತ್ಯಾಜ್ಯ ನೀರು ಕೊಳಚೆ ಪ್ರದೇಶದ ರೂಪು ತಳೆದಿದೆ.

ಮತ್ತೆ ಕೆಲವೇ ಕೆಲವು ಪರಿಸರ ಪ್ರೇಮಿಗಳು ತಮ್ಮ ಮನೆಗಳ ಅನುಪಯುಕ್ತ ಹಾಗೂ ತ್ಯಾಜ್ಯ ನೀರನ್ನು ಇಂಗಿಸಲು ತಮ್ಮ ಮನೆಗಳ ಪರಿಧಿಯಲ್ಲಿ ಇಂಗು ಗುಂಡಿಗಳನ್ನು ಮಾಡಿಕೊಂಡಿದ್ದಾರೆ.

ಕಾವೇರಿ ಹರಿದರೂ ಕುಡಿಯುವ ನೀರಿಲ್ಲ

ಕಣ್ಣೆದುರೇ ಕಾವೇರಿ ನದಿ ಹರಿಯುತ್ತಿದ್ದರೂ ಕೂಡ ಈ ಬಸವೇಶ್ವರ ಬಡಾವಣೆ ವಾಸಿಗಳು ಕಾವೇರಿ ನೀರು ಕುಡಿಯದಷ್ಟು ನತದೃಷ್ಟರು. ಅಂದರೆ ಸ್ಥಳೀಯ ಪಂಚಾಯಿತಿ ಆಡಳಿತ ಅಷ್ಟರ ಮಟ್ಟಿಗೆ ಇಲ್ಲಿನ ಜನರನ್ನು ಕಡೆಗಣಿಸಿದೆ ಎಂದೇ ಹೇಳಬಹುದು.

ಕಾವೇರಿ ನೀರನ್ನು ಕೆಆರ್‌ಎಸ್‌ನಿಂದ ನೂರಾರು ಕಿಮೀ ದೂರದ ಬೆಂಗಳೂರಿಗೆ ಹರಿಸುತ್ತಿದ್ದರೂ ಕೂಡ, ನದಿಯಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಈ ಬಡಾವಣೆಯ ವಾಸಿಗಳಿಗೆ ಕಾವೇರಿ ನೀರನ್ನು ಪೂರೈಸಲು ಆಗದಷ್ಟು ಬಡವಾಗಿದೆ ಸ್ಥಳೀಯ ಪಂಚಾಯಿತಿ.

ನೀರೇ ಬಾರದ ಕೊಳವೆ ಬಾವಿಗಳು

ಕಾವೇರಿ ನೀರು ಕೈಗೆಟುಕದ ನಕ್ಷತ್ರ ಎಂದು ಬಾವಿಸಿದ ಇಲ್ಲಿನ ನಿವಾಸಿಗಳು ಮನೆ ಕಟ್ಟುವಾಗಲೇ ಕಡ್ಡಾಯವಾಗಿ ಪ್ರತೀ ಮನೆ ಮನೆಗೆ ಕೊಳವೆ ಬಾವಿಯೊಂದನ್ನು ಹೊಂದುವ ಬಯಕೆಯಿಂದ ಕೊರೆಸಿದ್ದಾರೆ. ಆದರೆ ಇಲ್ಲಿನ ಬಹುತೇಕ ಮಂದಿಯ ಮನೆಗಳ ಕೊಳವೆ ಬಾವಿಗಳಲ್ಲಿ ಬೇಸಿಗೆಗೂ ಮುನ್ನವೇ ನೀರು ಇಂಗುತ್ತಿದೆ.

ಅರ್ಥಾತ್ ಅಂತರ್ಜಲವೇ ಬತ್ತಿ ಹೋಗುತ್ತಿದೆ

ಹಾಗಾಗಿ ಬೇಸಗೆಯಲ್ಲಿ ಈ ವಾಸಿಗಳಿಗೆ ನೀರಿಗೆ ಹಾಹಾಕಾರ ಏರ್ಪಡುತ್ತದೆ.