ಭಾಗಮಂಡಲ, ಜ. ೧೯: ಇಡೀ ದೇಶ ಕಾತರದಿಂದ ಕಾಯುತ್ತಿದ್ದ ಕೊರೊನಾ ನಿರೋಧಕ ಲಸಿಕಾ ಅಭಿಯಾನಕ್ಕೆ ದೇಶಾದ್ಯಂತ ಚಾಲನೆ ದೊರೆತಿದ್ದು, ಅದರ ಅಂಗವಾಗಿ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಭಾಗಮಂಡಲ ಹೋಬಳಿ ವ್ಯಾಪ್ತಿಯ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕರಿಕೆ ಆರೋಗ್ಯ ವಿಸ್ತಾರಣಾ ಕೇಂದ್ರದ ವೈದ್ಯಾಧಿಕಾರಿ ಸೇರಿದಂತೆ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಸೇರಿದಂತೆ ಒಟ್ಟು ಎಂಬತ್ತಮೂರು ಮಂದಿಗೆ ಪ್ರಥಮ ಹಂತದ ಅಭಿಯಾನದಲ್ಲಿ ಲಸಿಕೆ ನೀಡಲಾಯಿತು. ಕರಿಕೆಯ ಆಶಾ ಕಾರ್ಯಕರ್ತೆ ಸುಶೀಲ ಮೊದಲು ಲಸಿಕೆ ಪಡೆದುಕೊಂಡರು.
ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ಸಾಂಕ್ರಾಮಿಕ ರೋಗ ತಜ್ಞ ಡಾ. ಮಹೇಶ್, ತಾಲೂಕು ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಕುಸುಮ, ಇತರ ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು. ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೊನ್ನಮ್ಮ ಲಸಿಕಾ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದರು.