ನಾಪೋಕ್ಲು, ಜ. ೧೯: ಸಮೀಪದ ಪಾರಾಣೆ-ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ಬಾವಲಿ ಗ್ರಾಮದಿಂದ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ೯ನೇ ಮೈಲ್‌ವರೆಗೆ ಸುಮಾರು ೩.೭೫ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಜಮಾಯಿಸಿ ಒತ್ತಾಯಿಸಿದ ಘಟನೆ ನಡೆಯಿತು.

ಸರಕಾರ ಗ್ರಾಮೀಣಾಭಿವೃದ್ಧಿಗಾಗಿ ಕೋಟ್ಯಾಂತರ ರೂ. ವ್ಯಯಿಸುತ್ತಿದೆ. ಆದರೆ ಕಳಪೆ ಕಾಮಗಾರಿಯಿಂದ ಕೆಲವೇ ತಿಂಗಳುಗಳಲ್ಲಿ ರಸ್ತೆ ಹಾಳಾಗಿ ಹಣ ಪೋಲಾಗುತ್ತಿದೆ. ಇದರಿಂದ ಸರಕಾರ ಹಾಗೂ ಜನಪ್ರತಿನಿಧಿಗಳು ಮುಜುಗರಕ್ಕೆ ಸಿಲುಕುವಂತಾಗಿದೆ ಎಂದು ಹೇಳಿದ ಗ್ರಾಮಸ್ಥರು, ಶಾಸಕ ಕೆ.ಜಿ.ಬೋಪಯ್ಯ ಈ ರಸ್ತೆ ಕಾಮಗಾರಿಯ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು.

ಚೇನಂಡ ದೀನಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚೇನಂಡ ಜಪ್ಪು, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಅಚ್ಚಯ್ಯ, ಸಿ.ದೇವಯ್ಯ ಸೇರಿದಂತೆ ೩೦ಕ್ಕಿಂತಲೂ ಹೆಚ್ಚಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.