ಶನಿವಾರಸಂತೆ, ಜ. ೧೯: ಸಮೀಪದ ಬಾಣಾವರ ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಒಂದೆರೆಡು ದಿನಗಳಿಂದ ಒಂಟಿ ಸಲಗವೊಂದು ಬೀಡುಬಿಟ್ಟಿದ್ದು, ಗ್ರಾಮಗಳಿಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ರಾತ್ರಿ ಸಮೀಪದ ಗ್ರಾಮ, ಕಾಲೋನಿ ಹಾಗೂ ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದೆ. ಒದ್ದಯ್ಯ ಎಂಬವರ ಮನೆಯ ಮೇಲೂ ಸಲಗ ದಾಳಿ ಮಾಡಿದ್ದು, ಮನೆಯಲ್ಲಿದ್ದವರು ಓಡಿ ಜೀವ ಉಳಿಸಿಕೊಂಡಿದ್ದಾರೆ. ಮನೆಯ ಹಂಚು, ಗೋಡೆಗಳಿಗೆ ಸಲಗ ಹಾನಿಪಡಿಸಿದೆ ತೋಟಗಳಲ್ಲಿ ಬಾಳೆ, ತೆಂಗು ಇತ್ಯಾದಿ ಹಣ್ಣಿನ ಗಿಡಗಳನ್ನೂ ನಾಶಪಡಿಸಿದೆ ಎಂದು ದೂರಿದ್ದಾರೆ.
ಗ್ರಾಮಸ್ಥರು ಸಾರ್ವಜನಿಕರು ಓಡಿಸಿದರೆ, ಸಲಗ ಬಾಣಾವಾರ ಚೆಕ್ ಪೋಸ್ಟ್ಗೆ ಬಂದು ರಸ್ತೆಗೆ ಅಡ್ಡಲಾಗಿ ನಿಂತು ದಾಳಿ ಮಾಡಲು ಮುಂದಾಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟುವ ಕಾರ್ಯ ಮಾಡಿದರೂ ಮತ್ತೊಂದು ದಿಕ್ಕಿನಿಂದ ಬಂದು ದಾಳಿ ಮಾಡುತ್ತಿದೆ ಎಂದು ಗ್ರಾಮಸ್ಥರು ಆತಂಕಗೊAಡಿದ್ದು, ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ