ಮಡಿಕೇರಿ, ಜ. ೧೮ : ಹಾಸನ ತಾಲೂಕಿನ ಹೂವಿನಳ್ಳಿ ಕಾವಲು ಬಳಿ ಸೆಸ್ಕ್ ಕಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ (೩೫) ಎಂಬವರನ್ನು ತಾ.೧೫ ರಂದು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣೆಗೆ ಒಳಪಡಿಸಿದ್ದ ಕೊಡಗು ಮೂಲದ ಮೂವರು ಸೇರಿದಂತೆ ನಾಲ್ವರು ಕೊಲೆ ಕೃತ್ಯ ಮಾಡಿರುವುದು ತನಿಖೆ ಹಂತದಲ್ಲಿ ಸಾಬೀತಾಗಿದೆ. ಆರೋಪಿಗಳಾದ ಜಿಲ್ಲೆಯ ಮಕ್ಕಂದೂರು ಗ್ರಾಮದ ಅನುಕುಲ (೪೧), ಸುರೇಶ (೩೬), ಸತೀಶ (೩೪) ಹಾಗೂ ಹಾಸನ ಜಿಲ್ಲೆಯ ಸುದೀನ್ ಕುಮಾರ್ (ಆದರ್ಶ್-೩೦) ಅವರುಗಳನ್ನು ಹಾಸನ ಜಿಲ್ಲಾ ಪೊಲೀಸರು ಬಂಧಿಸಿದ್ದು ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಅಕ್ಕನಿಗೆ ಕಿರುಕುಳ - ಬಾವನ ಕೊಲೆಗೆ ಸ್ಕೆಚ್ ಹತ್ಯೆಯಾದ ಸಂತೋಷ್ ಕಳೆದ ೧೩ ವರ್ಷಗಳ ಹಿಂದೆ ಜಯಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದು, ಇತ್ತೀಚಿಗೆ ಸಂತೋಷ್ ಕೆಲಸಕ್ಕೆ ಸರಿಯಾಗಿ ಹಾಜರಾಗದೆ, ಮದ್ಯಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಮದ್ಯ ಸೇವಿಸಿ ಪತ್ನಿ ಜಯಶ್ರೀಗೆ ಸಂತೋಷ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಪರಿಸ್ಥಿತಿ ತಿಳಿದು ಕುಟುಂಬಸ್ಥರು ಹಲವು ಬಾರಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದರೂ ಕೂಡ ಸಂತೋಷ್ ಕಿರುಕುಳ ಮುಂದುವರೆಸಿದ್ದ.ಜಯಶ್ರೀಯ ಸಹೋದರ ಆದರ್ಶ್ ಇದಕ್ಕೆ ಅಂತ್ಯ ಹಾಡಲು ಯೋಜನೆ ರೂಪಿಸಿ ಕೊಲೆ ಬಗ್ಗೆ ತೀರ್ಮಾನಿಸಿ ತನ್ನ ದೊಡ್ಡಮ್ಮನ ಮಗ ಮಕ್ಕಂದೂರಿನ ಅನುಕುಲ ಜೊತೆ ಚರ್ಚಿಸಿ ಅಲ್ಲಿಗೆ ತಾ. ೧೫ ರಂದು ಬರುವಂತೆ ಸೂಚಿಸಿದ. ಮಕ್ಕಂದೂರಿನಿAದ ಪರಿಚಯದ ಗಾರೆ ಕೆಲಸ ಮಾಡುವ ಸುರೇಶ ಹಾಗೂ ಅಡುಗೆ ಕೆಲಸ ಮಾಡುವ ಸತೀಶ ಎಂಬವರನ್ನು ಸೇರಿಸಿ ಅನುಕುಲ ಕೂಡ ಅಲ್ಲಿಗೆ ತನ್ನ ಡಸ್ಟರ್ ಕಾರಿನಲ್ಲಿ ತಲುಪಿದ. ನಶೆ ಏರುತ್ತಿದ್ದಂತೆ ಜಗಳ ಆರಂಭವಾಯಿತು. ಸಂತೋಷ್‌ನನ್ನು ೬.೩೦ ರ ಸಮಯದಲ್ಲಿ ಅನುಕುಲ ಮತ್ತು ಆದರ್ಶ್ ಪಾರ್ಟಿ ಜಾಗದಿಂದ ಸ್ವಲ್ಪ ದೂರ ಕರೆದೊಯ್ದು ಅಲ್ಲಿ ಅನುಕುಲ ತನ್ನ ರಿವಾಲ್ವರ್‌ನಿಂದ ಸಂತೋಷ್‌ಗೆ ಗುಂಡು ಹಾರಿಸಿ ಕೊಲೆ ಮಾಡಿದ.

ನಂತರ ದೇಹವನ್ನು ಅಲ್ಲಿಯೇ ಬಿಟ್ಟು ಹಿಂದಕ್ಕೆ ಬಂದ ಅನುಕುಲ, ಸುರೇಶ ಹಾಗೂ ಸತೀಶನನ್ನು ಕಾರಿನಲ್ಲಿ ಕೂರಿಸಿಕೊಂಡು ವಾಪಾಸು ಮಕ್ಕಂದೂರಿಗೆ ಬಂದಿದ್ದಾನೆ. ಕೃತ್ಯ ನಡೆಸಿ ಆದರ್ಶ್ ಹಾಸನ ಕಡೆ ತೆರಳಿದ್ದಾನೆ.

ತಡರಾತ್ರಿಯಾದರೂ ಸಂತೋಷ್ ಬಾರದ ಹಿನ್ನೆಲೆ ಗಾಬರಿಗೊಂಡ ಪತ್ನಿ ಹಲವು ಬಾರಿ ಫೋನ್ ಕರೆ ಮಾಡಿದ್ದಾರೆ.

(ಮೊದಲ ಪುಟದಿಂದ) ಫೋನ್ ಸ್ವೀಕರಿಸದ ಹಿನ್ನೆಲೆ ಬೆಳಗ್ಗೆ ಹುಡುಕಾಟ ನಡೆಸಿದಾಗ ಹೂವಿನಳ್ಳಿ ಕಾವಲಿನಲ್ಲಿ ಮೃತದೇಹ ಕಂಡು ಬಂದಿದೆ.

ಮಿಂಚಿನ ಕಾರ್ಯಾಚರಣೆ

ಪೊಲೀಸರು ವಿಶೇಷ ತಂಡ ರಚಿಸಿ ಮಡಿಕೇರಿ, ಕುಶಾಲನಗರ ಕಡೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಮಿಂಚಿನ ಕಾರ್ಯಾಚರಣೆ ಮೂಲಕ ತಾ.೧೭ ರಂದು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಅನುಕುಲನ ಸ್ನೇಹಿತರಿಗೆ ಕೊಲೆ ವಿಚಾರ ಪೊಲೀಸರು ವಶಕ್ಕೆ ಪಡೆದುಕೊಳ್ಳಲು ಬರುವಾಗಲೇ ತಿಳಿದದ್ದು ಎನ್ನಲಾಗಿದೆ.

ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಡಸ್ಟರ್ ಕಾರು, ರಿವಾಲ್ವರ್, ೨೯ ಸಜೀವ ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಮಾರ್ಗದರ್ಶನ, ಹಾಸನ ಉಪವಿಭಾಗ ಡಿವೈಎಸ್ಪಿ ಪುಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಾಸನ ಗ್ರಾಮಾಂತರ ಸಿಪಿಐ ಪಿ.ಸುರೇಶ್, ಪಿಎಸ್‌ಐ ಬಸವರಾಜು, ಸಿಬ್ಬಂದಿಗಳಾದ ರವಿಕುಮಾರ್, ಸುಬ್ರಮಣ್ಯ, ಮಂಜುನಾಥ್, ದೇವರಾಜು, ಜುಲ್ಫಿಕರ್ ಅಹಮದ್ ಬೇಗ್, ಲೋಕನಾಥ್, ಸಂತೋಷ್, ಹರೀಶ್, ಜೀಪ್ ಚಾಲಕ ಗಿರೀಶ್ ಇದ್ದರು.